ಬೆಳಗಾವಿ: ರಾಜ್ಯ ಅಷ್ಟೇ ಅಲ್ಲ; ದೇಶವ್ಯಾಪಿ ಕೋಲಾಹಲ ಸೃಷ್ಟಿಸಿದ ಹಿಂದೂ ಅಶ್ಲೀಲ ಎನ್ನುವ ಹೇಳಿಕೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಹಿಂಪಡೆದಿದ್ದಾರೆ.
ಈ ಕುರಿತಂತೆ ಮುಖ್ಯಮಂತ್ರಿಗಳಿಗೆ ಬುಧವಾರ ಪತ್ರ ಬರೆದಿರುವ ಅವರು, ನಿಪ್ಪಾಣಿಯಲ್ಲಿ ಭಾನುವಾರ ನಡೆದ ಮಾನವ ಬಂಧುತ್ವ ವೇದಿಕೆ ಕಾರ್ಯಕ್ರಮದಲ್ಲಿ ತಾವು ನೀಡಿದ ಹೇಳಿಕೆಯನ್ನು ತಿರುಚಿ ವಿನಾ ಕಾರಣ ಗೊಂದಲ ಸೃಷ್ಟಿಸಲಾಗುತ್ತಿದೆ. ಹಾಗಾಗಿಯೇ ತಮ್ಮ ಹೇಳಿಕೆಯನ್ನು ವಾಪಸ್ ಪಡೆಯುವುದಾಗಿ ಅವರು ಹೇಳಿದ್ದಾರೆ.
ಹಿಂದೂ ಶಬ್ದ ಪರ್ಷಿಯನ್ ಭಾಷೆಯಿಂದ ಬಂದಿದೆ. ಇದು ಭಾರತಕ್ಕೆ ಹೇಗೆ ಬಂತು. ಹಲವಾರು ಲೇಖನಗಳಲ್ಲಿ ಹಿಂದೂ ಎಂಬ ಪದದ ಅರ್ಥ ಕೆಟ್ಟದ್ದಾಗಿದೆ ಎಂದು ಬರೆದಿರುತ್ತಾರೆ ಅಂತ ತಾವು ಹೇಳಿದ್ದು, ಈ ವಿಚಾರ ಸಾರ್ವಜನಿಕ ಚರ್ಚೆ ಆಗಬೇಕಾಗಿರುವುದು ಬಹಳ ಅವಶ್ಯಕವೆಂದು ತಿಳಿಸಿರುವುದಾಗಿ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ವಿಕಿಪೀಡಿಯಾ, ಪುಸ್ತಕಗಳು, ಶಬ್ದಕೋಶಗಳು ಮತ್ತು ಇತಿಹಾಸಕಾರರ ಬರಹಗಳ ಉಲ್ಲೇಖದ ಮೇಲೆ ಈ ಭಾಷಣ ಆಧಾರಿತವಾಗಿದೆ. ಕೆಲವು ಪಟ್ಟಬದ್ರ ಹಿತಾಸಕ್ತಿಗಳು ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಹೊರಟಿದ್ದಾರೆ. ಜೊತೆಗೆ ನನ್ನ ತೇಜೋವಧೆ ಮತ್ತು ಹಾನಿಯುಂಟು ಮಾಡುವ ವ್ಯವಸ್ಥಿತ ಪಿತೂರಿ ನಡೆದಿದೆ, ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿ ನೈಜ ಸ್ಥಿತಿಯನ್ನು ವಿವರಿಸದೆ ಈ ಅವಾಂತರ ಸೃಷ್ಟಿಸಿದವರ ಮೇಲೆ ತನಿಖೆ ಮಾಡುವಂತೆ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಬರೆದ ಪತ್ರದಲ್ಲಿ ಕೇಳಿಕೊಂಡಿದ್ದಾರೆ.
