ಹೆಬ್ಬಳ್ಳಿ ಗ್ರಾಮಕ್ಕೆ ಸಿಟಿ ಬಸ್ ಸೌಲಭ್ಯ ಕಲ್ಪಿಸಲು ಆಗ್ರಹ

Advertisement

ಹುಬ್ಬಳ್ಳಿ : ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮಕ್ಕೆ ಸಿಟಿ ಬಸ್ ದರದಲ್ಲಿಯೇ ಹುಬ್ಬಳ್ಳಿ ಘಟಕದಿಂದ ಬಸ್ ಸೌಲಭ್ಯ ಹಾಗೂ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಹೆಬ್ಬಳ್ಳಿ, ಶಿವಳ್ಳಿ, ಮಾರಡಗಿ, ಕನಕೂರು ಗ್ರಾಮ ಪಂಚಾಯತಿ ಅಧ್ಯಕ್ಷರುಗಳ ನಿಯೋಗ ಶುಕ್ರವಾರ ಹುಬ್ಬಳ್ಳಿಯಲ್ಲಿ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್. ಭರತ್ ಅವರಿಗೆ ಮನವಿ ಸಲ್ಲಿಸಿತು.
ನಿಯೋಗದ ನೇತೃತ್ವ ವಹಿಸಿದ್ದ ಹೆಬ್ಬಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ತೇಜಸ್ವಿನಿ ತಲವಾಯಿ ಮಾತನಾಡಿ, ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮಕ್ಕೆ ಈಗಾಗಲೇ ಹುಬ್ಬಳ್ಳಿ ಗ್ರಾಮೀಣ ಘಟಕದಿಂದ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಈ ಹಿಂದೆ ೨೦೧೪ ರಲ್ಲಿ ಗ್ರಾಮಸ್ಥರ ಮನವಿ ಮೆರೆಗೆ ಹುಬ್ಬಳ್ಳಿ ಸಿಟಿ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಆ ಬಸ್‌ಗಳು ೨೦೧೬-೧೭ ವರೆಗೂ ಕಾರ್ಯನಿರ್ವಹಿಸಿದವು. ಆದರೆ ಕಾರಣಾಂತರದಿಂದ ಅದನ್ನು ಮತ್ತೆ ಗ್ರಾಮೀಣ ಘಟಕಕ್ಕೆ ಸ್ಥಳಾಂತರಿಸಲಾಯಿತು. ಇದರಿಂದ ಹೆಬ್ಬಳ್ಳಿ ಬಸ್ ನಂಬಿಕೊಂಡಿದ್ದ ಶಿವಳ್ಳಿ, ಮಾರಡಗಿ, ವನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗುತ್ತಿದೆ. ಅಲ್ಲದೆ ಗ್ರಾಮಸ್ಥರು ಹುಬ್ಬಳ್ಳಿ ಬಸ್ ಸಮರ್ಪಕವಾಗಿ ಬರುತ್ತಿಲ್ಲ ಅದನ್ನು ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆ ಹರಿಸುವಂತೆ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.
ಅಲ್ಲದೆ ಹುಬ್ಬಳ್ಳಿ-ಹೆಬ್ಬಳ್ಳಿ ಗ್ರಾಮದ ನಡುವೆ ೧೮ ರಿಂದ ೧೯ ಕಿಮೀ ಅಂತರವಿದೆ. ಇದು ಸಿಟಿ ಬಸ್ ಓಡಿಸ ಬಹುದಾದ ಅಂತರವೇ ಆಗಿದೆ. ಧಾರವಾಡ ಘಟಕದಿಂದ ೨೨ ಕಿಮೀ ಅಂತರವಿರುವ ನಾಗಲಾವಿ ಗ್ರಾಮಕ್ಕೆ ಹುಬ್ಬಳ್ಳಿಯಿಂದ ೨೫ ಕಿಮೀ ಗೂ ಹೆಚ್ಚು ಅಂತರವಿರುವ ದುಮ್ಮವಾಡ, ೨೩ ಕಿಮೀ ಅಂತರವಿರುವ ಬಸನಕೊಪ್ಪ, ೨೨ ಕಿಮೀಗೂ ಹೆಚ್ಚು ಇರುವ ಛಬ್ಬಿ, ಬೆಟದೂರ, ಇಟಿಗಟ್ಟಿ ಸೇರಿದಂತೆ ವಿವಿಧ ಗ್ರಾಮಕ್ಕೆ ಸಿಟಿ ವ್ಯವಸ್ಥೆ ಕಲ್ಪಿಸಿಲಾಗಿದೆ. ಆದರೆ ಹೆಬ್ಬಳ್ಳಿ ಗ್ರಾಮಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಮಾತ್ರ ನೋವಿನ ಸಂಗತಿ.
ಅಲ್ಲದೆ ಹೆಬ್ಬಳ್ಳಿ ಗ್ರಾಮಕ್ಕೆ ಗ್ರಾಮೀಣ ಘಟಕದ ಬಸ್‌ಗಳು ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕೋವಿಡ್ ನಂತರದ ಪರಿಸ್ಥಿತಿಯಂತಲೂ ಹೇಳಲು ಪದಗಳೇ ಸಾಲುತ್ತಿಲ್ಲ. ಅಷ್ಟೋಂದು ಸಮಸ್ಯೆಗಳು ಇವೆ.
ಹೀಗಾಗಿ ನಮ್ಮ ಬೇಡಿಕೆಗಳನ್ನು ಆದಷ್ಟು ಬೇಗ ಈಡೇರಿಸಿ ಹೆಬ್ಬಳ್ಳಿ, ಮಾರಡಗಿ, ಶಿವಳ್ಳಿ, ವನಹಳ್ಳಿ, ತಲವಾಯಿ, ಕನಕೂರು ಸೇರಿದಂತೆ ವಿವಿಧ ಗ್ರಾಮಗಳ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿ ನಮ್ಮ ಗ್ರಾಮಸ್ಥರಿಗೆ ಆಗುತ್ತಿರುವ ಮಲತಾಯಿ ಧೋರಣೆಯನ್ನು ಸರಿ ಪಡಿಸಬೇಕೆಂದು ಒತ್ತಾಯಿಸುತ್ತೇವೆ.
ಇದರಿಂದ ಹುಬ್ಬಳ್ಳಿಗೆ ದುಡಿಯಲು ಹೋಗುವ ೬ ಕ್ಕೂ ಹೆಚ್ಚು ಗ್ರಾಮಗಳ ಸಾವಿರಕ್ಕೂ ಹೆಚ್ಚು ಕೂಲಿ ಕಾರ್ಮಿಕರಿಗೆ ಅನುಕೂಲವಾಗುತ್ತದೆ. ಹೀಗಾಗಿ ಆದಷ್ಟು ಬೇಗ ಸಮಸ್ಯೆ ಬಗೆಹರಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಲು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.
ಈ ಸಂದರ್ಭದಲ್ಲಿ ಹೆಬ್ಬಳ್ಳಿ ಗ್ರಾಮ ಪಂಚಾಯತಿ ಸದಸ್ಯರಾದ ಬಸು ಹೆಬ್ಬಾಳ, ವಿಠ್ಠಲ ಭೋವಿ, ಶಿವಳ್ಳಿ ಗ್ರಾಪಂ ಸದಸ್ಯರಾದ ಜಯಣ್ಣ, ಮಾರಡಗಿ, ಕನಕೂರು ಗ್ರಾಪಂ ಅಧ್ಯಕ್ಷರ ಪ್ರತಿನಿಧಿಗಳು, ಗ್ರಾಮದ ಮುಖಂಡರಾದ ಅಶೋಕ ಸೂರ್ಯವಂಶಿ, ಗ್ರಾಪಂ ಮಾಜಿ ಸದಸ್ಯ ಹೂವಪ್ಪ ಸೂರ್ಯವಂಶಿ ಸೇರಿದಂತೆ ಮೊದಲಾದವರು ಇದ್ದರು.