ಮೈಸೂರು: ರಾಮನಗರದಲ್ಲಿ ಸುರಿದ ಭಾರಿ ಮಳೆಗೆ ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ನೀರು ತುಂಬಿದ್ದ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಮತ್ತು ಸಂಸದ ಡಿ.ಕೆ. ಸುರೇಶ್ ಅವರ ಟೀಕೆಗೆ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ ಹೈವೆಯಿಂದ ಎಲ್ಲೆಲ್ಲಿ ಅಡಚಣೆಯಾಗಿದೆ ಅದನ್ನೂ ತೋರಿಸಿ, ಸರಿಪಡಿಸಿಕೊಡುವ ಜವಾಬ್ದಾರಿಯನ್ನು ನನಗೆ ಬಿಡಿ ಎಂದು ತಿಳಿಸಿದ್ಧಾರೆ.
ಇನ್ನು ರಾಮನಗರದಲ್ಲಿ ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ಅಪಾರ ಪ್ರಮಾಣದ ನೀರು ಹೆದ್ದಾರಿಯಲ್ಲಿ ನಿಂತಿತ್ತು. ಈ ಹಿನ್ನೆಲೆಯಲ್ಲಿ ಹಲವು ವಾಹನಗಳು ನೀರಿನಲ್ಲಿ ಮುಳುಗಿದ್ದವು ಮತ್ತು ಕಿ.ಮೀ. ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ವಾಹನ ಓಡಾಡಲು ರಸ್ತೆ ನಿರ್ಮಿಸಿ ಅಂದರೆ, ಸ್ವಿಮ್ಮಿಂಗ್ ಪೂಲ್ ನಿರ್ಮಿಸಿದ್ದಾರೆ. ಪ್ರತಾಪ್ ಸಿಂಹ ಹೆದ್ದಾರಿಯಲ್ಲಿ ಬಂದು ಈಜಾಡಲಿ ಎಂದು ಹೆಚ್. ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದರು.