ಹೆತ್ತ ಮಕ್ಕಳಿಗೆ ವಿಷವಿಕ್ಕಿ ತಾನೂ ಇಹಲೋಕ ತ್ಯಜಿಸಿದ ತಾಯಿ

ತಾಯಿ
Advertisement

ಬಾಗಲಕೋಟೆ: ಒಂದಲ್ಲ, ಎರಡಲ್ಲ, ಮೂವರು ಪುಟ್ಟ ಮಕ್ಕಳಿಗೆ ವಿಷ ಕುಡಿಸಿದ ಹೆತ್ತ ತಾಯಿ ತಾನೂ ವಿಷ ಸೇವಿಸಿ ಮೃತಪಟ್ಟ ಹೃದಯವಿದ್ರಾವಕ ಘಟನೆ ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ.
ಮಾನಸಿಕ ಖಿನ್ನತೆಗೆ ಒಳಗಾಗಿದ್ದ ತಾಯಿ ವಿಷ ಸೇವಿಸಿದ್ದಲ್ಲದೇ ಹೆತ್ತು ಹೊತ್ತ ತನ್ನ ಮೂವರು ಹೆಣ್ಣುಮಕ್ಕಳಿಗೂ ವಿಷ ಉಣಿಸಿದಳೆಂದರೆ ಅದೆಂತಹ ಚಿಂತೆ ಇರಬಹುದೆಂದು ಜನ ವ್ಯಥೆಪಡುವಂತಾಗಿದೆ. ಪತಿ ಮದ್ಯವ್ಯಸನಿ. ಜನಿಸಿದ್ದು ಮೂವರೂ ಹೆಣ್ಣುಮಕ್ಕಳು. ಊರಿಗೆ ಊರೇ ಈಗ ಮಮ್ಮಲ ಮರುಗುತ್ತಿದೆ.
ಯಲ್ಲವ್ವ ಉರ್ಫ್ ರೇಖಾ ಅರ್ಜುನ್ ಬಗಲಿ (೨೬), ಸನ್ನಿಧಿ (೮), ಸಮೃದ್ಧಿ (೫), ಶ್ರೀನಿಧಿ (೨.೫) ಮೃತ ದುರ್ದೈವಿಗಳು. ತಿಮ್ಮಾಪುರದ ತನ್ನ ತವರು ಮನೆಯಲ್ಲಿ ಜ್ಯೂಸ್ ಬಾಟಲಿಯಲ್ಲಿ ವಿಷ ಬೆರೆಸಿದಳು. ಮೊದಲು ತಾನು ಕುಡಿದಳು. ನಂತರ ಮಕ್ಕಳಿಗೂ ವಿಷ ಕೊಟ್ಟಳು. ಮೂವರು ಸ್ಥಳದಲ್ಲೇ ಮೃತಪಟ್ಟರೆ ಎರಡೂವರೆ ವರ್ಷದ ಮಗಳು ಶ್ರೀನಿಧಿ ಆಸ್ಪತ್ರೆಯಲ್ಲಿ ಮೃತಪಟ್ಟಿತು.