ಹುಬ್ಬಳ್ಳಿ-ಪುಣೆ ನೇರ ವಿಮಾನ ಸಂಚಾರ ಆರಂಭ

Advertisement

ಹುಬ್ಬಳ್ಳಿ : ಹುಬ್ಬಳ್ಳಿಯಿಂದ ಪುಣೆಗೆ ನೇರವಾಗಿ ಸಂಪರ್ಕಿಸುವ ವಿಮಾನಯಾನ ಸೇವೆ ರವಿವಾರ ಆರಂಭಗೊಂಡಿತು.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನಕ್ಕೆ ಜಲಫಿರಂಗಿಯ ಮೂಲಕ ಸ್ವಾಗತ ನೀಡಲಾಯಿತು.

ಮೊದಲ ದಿನವೇ ವಿಮಾನವು ಪ್ರಯಾಣಿಕರಿಂದ ಸಂಪೂರ್ಣ ಭರ್ತಿಯಾಗಿತ್ತು.
ಇದರಿಂದ ಹುಬ್ಬಳ್ಳಿ ಧಾರವಾಡ ಅವಳಿ ನಗರ ಹಾಗೂ ಇಡೀ ಉತ್ತರ ಕರ್ನಾಟಕ ಭಾಗದ ಜನರಿಗೆ ಅನುಕೂಲವಾಗಲಿದೆ.
ಹುಬ್ಬಳ್ಳಿಯಿಂದ ಸಂಜೆ 6.30 ಕ್ಕೆ ಹೊರಟ ವಿಮಾನ 7.30 ಕ್ಕೆ ಪುಣೆ ತಲುಪಿತು. ರಾತ್ರಿ 8 ಗಂಟೆಗೆ ಪುಣೆಯಿಂದ ಹೊರಟು 9 ಗಂಟೆಗೆ ಹುಬ್ಬಳ್ಳಿ ತಲುಪಿತು. ಹುಬ್ಬಳ್ಳಿಯಿಂದ 78 ಪ್ರಯಾಣಿಕರು ಪುಣೆಗೆ ಪ್ರಯಾಣಿಸಿದರೆ, ಪುಣೆಯಿಂದ ಹುಬ್ಬಳ್ಳಿಗೆ 45 ಪ್ರಯಾಣಿಕರು ಆಗಮಿಸಿದರು.
ಆರಂಭಿಕವಾಗಿ ವಾರದಲ್ಲಿ ಮೂರು ದಿನ ಇಂಡಿಗೋ ವಿಮಾನಯಾನ ಸಂಸ್ಥೆಯು ಹುಬ್ಬಳ್ಳಿ ಮತ್ತು ಪುಣೆ ನಡುವೆ ವಿಮಾನ ಸೇವೆ ಒದಗಿಸಲಿದೆ ಎಂದು ವಿಮಾನ ನಿಲ್ದಾಣ ಮೂಲಗಳು ತಿಳಿಸಿವೆ.

ಕೇಂದ್ರ ಸಚಿವ ಜೋಶಿ ಕೃತಜ್ಞತೆ : ನಮ್ಮ ಪ್ರಸ್ತಾವನೆಗೆ ಸ್ಪಂದಿಸಿ ವಿಮಾನಯಾನ ಸೇವೆ ಆರಂಭಿಸಿದ್ದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ, ಕೇಂದ್ರ ವಿಮಾನಯಾನ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಇಂಡಿಗೋ ಸಂಸ್ಥೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.