ಹುಬ್ಬಳ್ಳಿ: ಬಹುನಿರೀಕ್ಷಿತ ಹುಬ್ಬಳ್ಳಿ- ದೆಹಲಿ ವಿಮಾನಯಾನ ಸೋಮವಾರದಿಂದ ಆರಂಭವಾಗಿದ್ದು, ಇದರೊಂದಿಗೆ ರಾಷ್ಟ್ರ ರಾಜಧಾನಿಗೆ ರಾಜ್ಯದ ಎರಡನೇ ರಾಜಧಾನಿಯಿಂದ ವಿಮಾನ ಬೇಡಿಕೆ ಈಡೇರಿದಂತಾಗಿದೆ.ಇಂಡಿಗೊ' ಸಂಸ್ಥೆಯ ವಿಮಾನವು ಪ್ರತಿನಿತ್ಯ ದೆಹಲಿಗೆ ಪ್ರಯಾಣಿಸಲಿದ್ದು, ರಾಜಧಾನಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ. ಹಿಂದೊಮ್ಮೆ ಇಲ್ಲಿಂದ ದೆಹಲಿಯ ಹಿಂಡಾನ್ (ದೇಶಿ) ನಿಲ್ದಾಣಕ್ಕೆ ಸೇವೆ ಆರಂಭವಾಗಿತ್ತು. ಆದರೆ, ಪ್ರಯಾಣಿಕರಿಂದ ಉತ್ತಮ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಸ್ಥಗಿತವಾಗಿತ್ತು. ಕಿತ್ತೂರು ಪ್ರಾಂತ್ಯದಲ್ಲಿ ಎಫ್‌ಎಂಸಿಜಿ ಕ್ಲಸ್ಟರ್ ಘೋಷಣೆಯಾಗಿ, ಉದ್ಘಾಟನೆಯಾದ ನಂತರ ಪುನಃ ದೆಹಲಿಗೆ ವಿಮಾನಯಾನ ಆರಂಭಿಸುವಂತೆ ಆಗ್ರಹ ಸಾರ್ವತ್ರಿಕವಾಗಿ ಕೇಳಿ ಬಂದಿತ್ತು. ಸೇವೆಯನ್ನು ಸೋಮವಾರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಚಿವ ಪ್ರಲ್ಹಾದ ಜೋಶಿ ಅವರೇ ಉದ್ಘಾಟಿಸುವ ಜೊತೆಗೆ, ಅದೇ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಮಾಡಿದ್ದು ವಿಶೇಷ. ವಿಮಾನ ನಿಲ್ದಾಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಈ ಸೇವೆಗೆ ಚಾಲನೆ ನೀಡಿದ ಸಚಿವರು,
ಕಿತ್ತೂರು ಪ್ರಾಂತ್ಯ ಮಾತ್ರವಲ್ಲ, ಕಲ್ಯಾಣ ಹಾಗೂ ಮಧ್ಯ ಕರ್ನಾಟಕ ಜಿಲ್ಲೆಗಳ ಜನರಿಗೂ ಇದರ ಪ್ರಯೋಜನ ದೊರೆಯಲಿದೆ’ ಎಂದು ಹೇಳಿದರು.
ದೆಹಲಿ-ಹುಬ್ಬಳ್ಳಿ ನಡುವೆ ವಿಮಾನಯಾನ ಸೇವೆಗೆ ಅನುಮತಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವ ಸಿಂಧಿಯಾ ವರ್ಚುವಲ್ ವೇದಿಕೆ ಮೂಲಕ ಭಾಗಿಯಾಗಿ ಸೇವೆಯ ಉಪಯೋಗವನ್ನು ಪಡೆಯುವಂತೆ ಕೋರಿದರು.
ವಿಮಾನ ವೇಳೆ : ಈ ವಿಮಾನವು ಪ್ರತಿದಿನ ಬೆಳಿಗ್ಗೆ ೧೦ಕ್ಕೆ ದೆಹಲಿಯಿಂದ ಹೊರಟು ಮಧ್ಯಾಹ್ನ ೧೨.೪೫ಕ್ಕೆ ಹುಬ್ಬಳ್ಳಿಗೆ ಹಾಗೂ ಮಧ್ಯಾಹ್ನ ೧.೧೫ಕ್ಕೆ ಹುಬ್ಬಳ್ಳಿಯಿಂದ ಹೊರಟು ೩.೪೫ಕ್ಕೆ ದೆಹಲಿಯನ್ನು ತಲುಪುತ್ತದೆ ಎಂದು ಮೂಲಗಳು ಹೇಳಿವೆ. ಮೊದಲ ದಿನ ಹುಬ್ಬಳ್ಳಿಯಿಂದ (ಸಚಿವ ಜೋಶಿ ಸೇರಿ) ೧೫೨ ಪ್ರಯಾಣಿಕರು ಹಾಗೂ ದೆಹಲಿಯಿಂದ ೧೭೯ ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸಿದರು.