ಹುಬ್ಬಳ್ಳಿ ಜನರ ಪ್ರೀತಿಗೆ ಪ್ರಧಾನಿ ಪುಳಕಿತ

ಮೋದಿ ಮೋಡಿ
Advertisement

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ಗುರುವಾರ ಅಕ್ಷರಶಃ ಪ್ರಧಾನಿ ನರೇಂದ್ರ ಮೋದಿ ಅವರ ಮೋಡಿಯಲ್ಲಿ ಸಿಲುಕಿತ್ತು. ನಮೋ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ…
೨೬ನೇ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನೆಗೆ ಪ್ರಧಾನಿ ಆಗಮಿಸುವುದು ನಿಶ್ಚಿತವಾಗುತ್ತಿದ್ದಂತೆಯೇ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಗುರುವಾರ ಮಧ್ಯಾಹ್ನವೇ ಪ್ರಧಾನಿ ಸಾಗುವ ಮಾರ್ಗದ ಇಕ್ಕೆಲಗಳಲ್ಲಿ ಮೂರು ತಾಸು ನಿಂತು ಕಾದಿದ್ದರು. ಪ್ರಧಾನಿ ಸ್ವಾಗತಕ್ಕೆ ಗೋಕುಲ ರಸ್ತೆಯ ಉದ್ದಕ್ಕೂ ಬಣ್ಣದ ರಂಗೋಲಿಗಳನ್ನು ಹಾಕಲಾಗಿತ್ತು.
ಮಧ್ಯಾಹ್ನ ೩.೩೦ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಪ್ರಧಾನಿ ಮೋದಿ ಅವರು ಯುವಜನೋತ್ಸವ ಉದ್ಘಾಟನೆ ಸಮಾರಂಭ ನಡೆಯುವ ರೈಲ್ವೆ ಮೈದಾನಕ್ಕೆ ಸಾಗುವ ೯ ಕಿ.ಮೀ ಮಾರ್ಗದಲ್ಲಿ ರೋಡ್ ಶೋ ನಡೆಸಿದರು. ಗೋಕುಲ ರಸ್ತೆ, ಹೊಸೂರು ವೃತ್ತ, ಹಳೇ ಕೋರ್ಟ್ ವೃತ್ತದಲ್ಲಿ ಅಸಂಖ್ಯ ಜನರು ಸೇರಿದ್ದರು.
ಮೋದಿಯವರನ್ನು ಕಂಡ ಜನ ಕೈಯಲ್ಲಿ ಮೋದಿಯವರ ಭಿನ್ನ ವಿಭಿನ್ನ ಪೋಸ್ಟರ್ ಹಿಡಿದು ಮೋದಿ… ಮೋದಿ… ಎಂದು ಘೋಷಣೆ ಕೂಗಿದರು. ಜೈಕಾರ ಹಾಕಿದರು. ಜಬ್ ತಕ್ ಹೇ ಚಾಂದ್… ಜಬ್ ತಕ್ ಹೇ ಸೂರಜ್…. ಮೋದಿ ಸದಾ ರಹೇ ಎಂದು ಘೋಷಣೆ ಕೂಗಿದರು.
ಪ್ರಧಾನಿಯವರ ವಾಹನದ ಮೇಲೆ ಹೂಮಳೆಗರೆದರು. ಪ್ರಧಾನಿ ಮೋದಿಯವರೂ ಕೂಡಾ ಅಷ್ಟೇ ಪ್ರೀತಿಯಿಂದ ಹಸನ್ಮುಖಿಗಳಾಗಿ ಕಾರಿನಿಂದ ಹೊರನಿಂತು ಜನರತ್ತ ಕೈ ಬೀಸಿ ಜನರ ಪ್ರೀತಿಗೆ ಸ್ಪಂದಿಸಿದರು.