ಬೆಳಗಾವಿ: ಹುಬ್ಬಳ್ಳಿಯ ಭೈರಿದೇವರಕೊಪ್ಪದ ದರ್ಗಾ ತೆರವಿಗೆ ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು.
ಶೂನ್ಯ ವೇಳೆಯಲ್ಲಿ ಶಾಸಕ ಅಬ್ಬಯ್ಯ ಪ್ರಸಾದ ಈ ವಿಷಯವನ್ನು ಪ್ರಸ್ತಾಪ ಮಾಡಿದರು. ಇದಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡಾ ಧ್ವನಿಗೂಡಿಸಿ, ದರ್ಗಾ ತೆರವು ವಿವಾದಕ್ಕೆ ಸಂಬಂಧಿಸಿದಂತೆ ಸ್ಥಳೀಯರ ಜೊತೆ ಮಾತುಕತೆ ನಡೆಸುವಂತೆ ಸಿಎಂ ಬಸವರಾಜ ಬೊಮ್ಮಾಯಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸ್ಥಳೀಯರ ಜೊತೆ ಮಾತುಕತೆ ನಡೆಸುವುದಾಗಿ ತಿಳಿಸಿದರು.
ಈ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಬಹಳ ವರ್ಷಗಳಿಂದ ಇದ್ದ ದರ್ಗಾ ಅದು. ನಾನು ಸಿಎಂ ಆಗಿದ್ದಾಗಲೂ ದರ್ಗಾ ತೆರವು ವಿಚಾರ ಬಂದಿತ್ತು. ಆದರೆ ರಸ್ತೆಗಾಗಿ ದರ್ಗಾ, ಗುಡಿ ಯಾವುದನ್ನೂ ಮುಟ್ಟಲು ಹೋಗಬೇಡಿ ಎಂದಿದ್ದೆ. ಇವಾಗ ರಸ್ತೆ ಆಗಿದೆ, ಕೋರ್ಟ್ ಸ್ಟೇ ತೆರವಾದ ಹಿನ್ನೆಲೆಯಲ್ಲಿ ಇದ್ದಕ್ಕಿದ್ದಂತೆ ದರ್ಗಾವನ್ನು ತೆರವುಗೊಳಿಸಲು ಮುಂದಾಗಿದ್ದು ಸರಿಯಲ್ಲ ಎಂದರು.