ಶಿಮ್ಲಾ: ಹಿಮಾಚಲ ಸಿಎಂ ಸುಖವಿಂದರ್ ಸಿಂಗ್ ಸುಖು ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಪ್ರಧಾನ ಮಂತ್ರಿ ಭೇಟಿಗೂ ಮುನ್ನ ಕೋವಿಡ್ ಪರೀಕ್ಷೆಗೆ ಒಳಪಡಿಸುವುದು ವಾಡಿಕೆ. ಈ ವೇಳೆ, ರಾಷ್ಟ್ರ ರಾಜಧಾನಿಯಲ್ಲಿ ಸುಖ್ವಿಂದರ್ ಸಿಂಗ್ ಸುಖು ಅವರಿಗೆ ಪಾಸಿಟಿವ್ ಕಂಡುಬಂದಿದೆ ಎಂದು ಸೋಮವಾರ ರಾಜ್ಯ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.
ಸೋಮವಾರ ಹೊಸದಿಲ್ಲಿಯಲ್ಲಿ ಮುಖ್ಯಮಂತ್ರಿಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಬೇಕಾಗಿತ್ತು. ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಈಗ ಸಭೆಯನ್ನು ಮುಂದೂಡಲಾಗಿದೆ ಎಂದು ಅವರು ಹೇಳಿದರು.
ಉಪಮುಖ್ಯಮಂತ್ರಿ ಮುಖೇಶ್ ಅಗ್ನಿಹೋತ್ರಿ, ರಾಜ್ಯ ಕಾಂಗ್ರೆಸ್ ಮುಖ್ಯಸ್ಥೆ ಪ್ರತಿಭಾ ಸಿಂಗ್ ಮತ್ತು 38 ಹೊಸ ಚುನಾಯಿತ ಶಾಸಕರೊಂದಿಗೆ ಸುಖು ಅವರು ಡಿಸೆಂಬರ್ 16 ರಂದು ರಾಜಸ್ಥಾನದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಸೇರಿದ್ದರು.
ಸುಖು ಅವರು ನವದೆಹಲಿಯಲ್ಲಿದ್ದು, ಕಳೆದ ಕೆಲವು ದಿನಗಳಿಂದ ಹಿಮಾಚಲ ಪ್ರದೇಶದ ಎಐಸಿಸಿ ಉಸ್ತುವಾರಿ ರಾಜೀವ್ ಶುಕ್ಲಾ ಮತ್ತು ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿದ್ದಾರೆ.