ಬಾಗಲಕೋಟೆ: ಹಿಜಾಬ್ ವಿಷಯದಲ್ಲಿ ಸ್ಪಷ್ಟ ನಿರ್ಧಾರವಾಗಿಲ್ಲ. ಇದು ತ್ರೀಸದಸ್ಯ ಇಲ್ಲವೇ ಪಂಚ ಸದಸ್ಯ ಪೀಠಕ್ಕೆ ಹೋಗುವ ಸಂದರ್ಭವಿದೆ. ಅಲ್ಲಿಯವರೆಗೆ ಹೈಕೋರ್ಟನ ಆದೇಶ ಚಾಲ್ತಿಯಲ್ಲಿರುತ್ತದೆ. ಇವತ್ತಿನ ಆದೇಶದಿಂದ ಶಾಲೆಯ ಒಳಗೆ ಹಿಜಾಬ್ ಹಾಕಬಾರದು ಎಂಬ ಸರಕಾರದ ಆದೇಶ ಮುಂದುವರೆಯುತ್ತದೆ. ಎರಡು ಸದಸ್ಯರು ಅದನ್ನು ನಿರಾಕರಿಸಿದ್ದರೆ ಮಾತ್ರ ಅದನ್ನು ತೆಗೆಯಬೇಕಾಗಿತ್ತು. ಶಾಲೆಯ ಒಳಗೆ ಹಿಜಾಬ್ ತೆಗೆದಿಟ್ಟು ಶಾಲೆ ಪ್ರವೇಶಿಸುವ ನಮ್ಮ ನಿಲುವಿನಲ್ಲಿ ಯಾವುದೇ ದಕ್ಕೆ ಬಂದಿಲ್ಲ ಎಂದು ಉಡಪಿ ಶಾಸಕ ರಘುಪತಿ ಭಟ್ಟ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇಂದು ಬಂದಂತಹ ತೀರ್ಪಿನಲ್ಲಿ ಎರಡು ಸುಪ್ರೀಂ ಕೋರ್ಟ್‌ನಲ್ಲಿ ಎರಡು ಅಭಿಪ್ರಾಯಗಳು ಬಂದಿವೆ. ಈ ಎರಡು ಅಭಿಪ್ರಾಯಗಳಲ್ಲಿ ಒಬ್ಬರು ಹೈಕೋರ್ಟನ ಆದೇಶ ಎತ್ತಿ ಹಿಡಿದಿದ್ದು ಮತ್ತು ಅರ್ಜಿದಾರರದ್ದು ವಜಾ ಮಾಡಿದ್ದಾರೆ. ಇನ್ನೊಬ್ಬರು ಕೆಲವು ಕಾರಣಗಳನ್ನು ಕೊಟ್ಟು ಅವರ ಆದೇಶದಲ್ಲಿ ಕೆಲವು ಹಳ್ಳಿಯ ಭಾಗದಲ್ಲಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಮುಗಿಸಲು ಹಿಜಾಬ್ ಬೇಕು ಎಂದು ವಾದ ಮಂಡಿಸಿದ್ದಾರೆ. ಇನ್ನೂ ಸ್ಪಷ್ಟವಾದ ಆದೇಶ ತ್ರೀ ಸದಸ್ಯ ಇಲ್ಲವೇ ಪಂಚ ಸದಸ್ಯರ ಪೀಠದ ಸುಪ್ರೀಂ ಸದಸ್ಯರು ಮಾಡಿದ ನಂತರ ತಿಳಿಯುತ್ತದೆ. ಅಲ್ಲಿಯೂ ಕೂಡಾ ನಾವು ಸರಿಯಾದ ದಾಖಲೆಯನ್ನು ಒದಗಿಸುತ್ತೇವೆ. ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟನಲ್ಲಿ ನಮ್ಮ ಸರಕಾರಿ ವಕೀಲರು ಸರಿಯಾದ ದಾಖಲೆಯನ್ನು ಒದಗಿಸಿದ್ದಾರೆ.
ಪಂಚ ಸಮಿತಿಗೆ ಒದಗಿಸಲು ನಮ್ಮಲ್ಲಿ ಎಲ್ಲ ದಾಖಲೆಗಳಿವೆ. ಯಾವುದೇ ದಾಖಲೆ ಇಲ್ಲದೇ ನಾವು ಮಾತನಾಡುವುದಿಲ್ಲ. 15-20 ವರ್ಷದಿಂದ ಹಿಜಾಬ್ ತೆಗೆದಿಟ್ಟು ಶಾಲೆಗೆ ಬರುತ್ತಿದ್ದ ಮಕ್ಕಳು ಸಿಎಫ್‌ಐ ಅವರ ಪ್ರಚೋದನೆಯಿಂದ ಡಿಸೆಂಬರ್ 27ರಿಂದ ಹಿಜಾಬ್ ಬೇಕು ಎಂದು ಹೇಳಿದ್ದಾರೆ. 45 ದಿನ ಹಿಜಾಬ್ ತೆಗೆದಿಟ್ಟು ಶಾಲೆಗೆ ಬಂದಿರುವ ದಾಖಲೆಗಳು ನಮ್ಮ ಬಳಿ ಇವೆ.