ಆಕ್ಷೇಪಾರ್ಹ ಟ್ವೀಟ್ ಮಾಡಿ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ ಆರೋಪದಲ್ಲಿ ಬಂಧಿತನಾಗಿದ್ದ ನಟ ಚೇತನ್ ಗೆ 32ನೇ ಎಸಿಎಂಎಂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದರು. ಅವರನ್ನು ಕೋರ್ಟಿಗೂ ಹಾಜರುಪಡಿಸಿದ್ದರು. ಪೊಲೀಸರು ಹಾಕಿರುವ ಎಫ್‌ಐಆರ್ ಆಧರಿಸಿ ನ್ಯಾಯಾಲಯವು ಚೇತನ್ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು. ಈ ಸಂದರ್ಭದಲ್ಲಿ ಚೇತನ್ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಮಾನ್ಯ ನ್ಯಾಯಾಲಯವು ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿಕೆ ಮಾಡಿತ್ತು, ಇಂದು ವಿಚಾರಣೆ ನಡೆಸಿ ಇಪ್ಪತ್ತೈದು ಸಾವಿರ ರೂಪಾಯಿ ವೈಯಕ್ತಿಕ ಬಾಂಡ್ ಮತ್ತು ಒಬ್ಬರ ಭದ್ರತೆ ನೀಡುವಂತೆ ನ್ಯಾಯಾಧೀಶೆ ಲತಾ ಅವರು ಆದೇಶಿಸಿದ್ದಾರೆ.