ಹಾಲಿ, ಮಾಜಿ ಶಾಸಕರ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿ

Advertisement

ಮುದಗಲ್: ಪಟ್ಟಣದ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ವಸತಿ ಗೃಹ ಹಾಗೂ ನವೀಕರಣಗೊಂಡ ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕ ಡಿ.ಎಸ್. ಹೂಲಗೇರಿ ಹಾಗೂ ಮಾಜಿ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ಅವರ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿಯಾದ ಘಟನೆ ಶನಿವಾರ ನಡೆದಿದೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಜಿ ಶಾಸಕ ಮಾನಪ್ಪ ವಜ್ಜಲ್ ಅವರು ಮಾತನಾಡಿ, ಮುದಗಲ್ ಪಟ್ಟಣದಲ್ಲಿ 24×7 ಕುಡಿಯುವ ನೀರಿನ ಯೋಜನೆ ತಾವು ಶಾಸಕರಾಗಿರುವ ಅವಧಿಯಲ್ಲಿ ಆರಂಭಗೊಂಡಿದ್ದು, ಏಳು ವರ್ಷಗಳು ಕಡೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಇದಕ್ಕೆ ನನ್ನನ್ನು ಹಿಡಿದುಕೊಂಡು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯೋ, ಅಧಿಕಾರಿಗಳ ನಿರ್ಲಕ್ಷ್ಯಯೋ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕರ ರಸ್ತೆ ಅಭಿವೃದ್ಧಿಗಾಗಿ ಅನುದಾನವನ್ನು ತಂದಿದ್ದಾರೆ. ಆದರೆ, ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸೇರಿಕೊಂಡು ಹಾವಿನಂತೆ ರಸ್ತೆ ನಿರ್ಮಾಣ ಮಾಡಿದ್ದಾರೆ ಎಂಬುವುದು ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಮಾತನಾಡುತ್ತಿರುವಾಗ ಶಾಸಕ ಹೂಲಿಗೇರಿ ಅವರ ಬೆಂಬಲಿಗರು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಮಾತನಾಡಿ ಎಂದು ಆಕ್ಷೇಪಿಸಿದರು. ಅಲ್ಲದೇ ಅಧಿಕಾರಿಗಳು ನಿರ್ಲಕ್ಷವಹಿಸಿದ್ದರೆ, ಶಾಸಕರು ತಾವು ಸೇರಿಕೊಂಡು ಅಧಿಕಾರಿಗಳ ಸಭೆ ನಡೆಸಿ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಯಾಗಿ ಮಾನಪ್ಪ ವಜ್ಜಲ್ ಅವರ ಬೆಂಬಲಿಗರೂ ಮಾತಿಗಿಳಿದ ಕಾರಣ ಮಾತಿನ ಚಕಮಕಿಗೆ ಕಾರಣವಾಯಿತು. ಚುನಾವಣೆ ಸಮೀಪಿಸುತ್ತಿದ್ದಂತೆ ಮಾಜಿ ಹಾಗೂ ಹಾಲಿ ಶಾಸಕರ ಬೆಂಬಲಿಗರ ಸಂಘರ್ಷವೂ ಹೆಚ್ಚಾಗುತ್ತದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿತು.