ರಾಜ್ಯದಲ್ಲಿ ಈಗ ಶ್ವೇತ ಸಮರ ಜೋರಾಗಿದೆ.
ಅಮೂಲ್ ಮತ್ತು ನಂದಿನಿ ಎರಡೂ ಬ್ರ್ಯಾಂಡಿನ ಹಾಲಿನ ರಾಜಕಾರಣಕ್ಕೆ ರಾಜಕೀಯ ನಾಯಕರು ಕಳೆದೊಂದು ವಾರದಿಂದ ಸಾಕಷ್ಟು ಹುಳಿ ಹಿಂಡಿದ್ದಾರೆ. ಈಗೆಲ್ಲ ಕನ್ನಡಿಗರ ಅಸ್ಮಿತೆ, ಕನ್ನಡ ಸಂಸ್ಥೆಗಳ ಮತ್ತು ರೈತರ ಸ್ವಾಭಿಮಾನ, ಗ್ರಾಹಕರ ಕಿಚ್ಚು ಎಲ್ಲವೂ ಹಾಲಾಹಲ ಸ್ವರೂಪವನ್ನು ದಿಢೀರ್ ಆಗಿ ಪಡೆದಿವೆ.
ರಾಜ್ಯ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಅಮೂಲ್ ರ‍್ಸಸ್ ನಂದಿನಿ, ಗುಜರಾತ್ ರ‍್ಸಸ್ ಕರ್ನಾಟಕ ಎನ್ನುವ ಸ್ವರೂಪವನ್ನು ಪಡೆದುಕೊಂಡಿವೆ. .
ಇದಕ್ಕೆ ಹಾಲಿನ ಸಮರವೆನ್ನಿ, ರಾಜಕೀಯಕ್ಕೆ ಹಾಲು ಮೊಸರಿನ ಅಭಿಷೇಕವೆನ್ನಿ. ಮತಾಕರ್ಷಣೆಯ ವಿಷಯವಾದದ್ದಂತೂ ನಿಜ. ಎಷ್ಟೆಂದರೆ ಎರಡು ಬ್ರ್ಯಾಂಡಿಗಿಂತಲೂ ರಾಜಕೀಯ ಪಕ್ಷಗಳ ನೇತಾರರ ಮೇಲಿನ ದ್ವೇಷಾಸೂಯೆ ಹೆಚ್ಚಿಸಲು ಕಿಚ್ಚು ಹೊತ್ತಿಕೊಂಡಿದೆ.
ಇಷ್ಟಕ್ಕೂ ಹಾಲು ಉತ್ಪಾದಕರ ಇಂದಿನ ಪರಿಸ್ಥಿತಿಯ ಬಗ್ಗೆ ಮಾತ್ರ ಚರ್ಚೆಯಾಗುತ್ತಿಲ್ಲ. ಮನೆಯಲ್ಲಿಯೇ ಒಂದೋ ಎರಡೋ ಆಕಳು ಎಮ್ಮೆ ಸಾಕಿಕೊಂಡ ರೈತ ಮಹಿಳೆ ಕೇಳುವುದು, ಸರ್ಕಾರವೇ ಘೋಷಿಸಿದ ಹಾಲಿನ ಸಬ್ಸಿಡಿಯನ್ನು ಎಂದು ನೀಡುತ್ತೀರಿ? ನಾನು ಸಾಕಿದ ಆಕಳು- ಎಮ್ಮೆ ತಿನ್ನುವ ಆಹಾರ, ಹಿಂಡಿ- ಹುಲ್ಲು, ಭೂಸಾ ಇತ್ಯಾದಿಗಳ ದರ ಹೆಚ್ಚಿಸಿದ್ದೇಕೆ? ಇಳಿಸುವುದೆಂದು? ಜಾನುವಾರುಗಳಿಗೆ ತಗಲುವ ರೋಗಗಳ ಚಿಕಿತ್ಸೆಗೆ ಪಶುವೈದ್ಯರೆಲ್ಲಿ? ಮುದಿ ದನ ಮಾರುವುದು ಹೇಗೆ? ಕೊಳ್ಳುವವರು ಯಾರು?' ಎಂಬಿತ್ಯಾದಿ ಪ್ರಶ್ನೆಗಳನ್ನು. ಚುನಾವಣೆಯಲ್ಲಿ ಅಮೂಲ್ ತಾಜಾ ಹಾಲು ಬೆಂಗಳೂರು ನಗರಕ್ಕೆ ಲಭ್ಯ ಎನ್ನುವ ವಿಷಯವೇ ಪ್ರಧಾನವಾಗಿದ್ದರೆ, ಇದೇ ರಾಜ್ಯದಲ್ಲಿ ಪಶು ಸಾಕುವ ಬಡಪಾಯಿ ರೈತನ ಗೋಳೇನು? ಎನ್ನುವುದು ಚುನಾವಣೆಯ ವಿಷಯವೇ ಆಗಿಲ್ಲ!. ರಾಜ್ಯ ಸರ್ಕಾರದ ಅಂಕಿಸಂಖ್ಯೆಗಳ ಪ್ರಕಾರ ಕರ್ನಾಟಕದ ಹಾಲು ಉತ್ಪಾದಕರಿಗೆ ಮರ‍್ನಾಲ್ಕು ತಿಂಗಳ ಸಬ್ಸಿಡಿ, ೪೮೦ ಕೋಟಿ ರೂಪಾಯಿಯಷ್ಟು ಜಮೆ ಆಗಿಲ್ಲ. ಹಾಲಿನ ದರ ಹೆಚ್ಚಿಸಿ ಅಥವಾ ಪಶು ಆಹಾರಗಳ ದರ ಇಳಿಸಿ ಎಂಬ ರೈತರ ಆಗ್ರಹಕ್ಕೆ ಧ್ವನಿ ಕೊಟ್ಟವರಿಲ್ಲ. ೨೦೧೫ಕ್ಕಿದ್ದ ಹಿಂಡಿ, ಭೂಸಾ ದರ ಈಗ ಒಂದೂವರೆ ಪಟ್ಟು ಏರಿಕೆಯಾಗಿದೆ. ಆದರೆ ರೈತರಿಂದ ಹಾಲು ಖರೀದಿ ದರ ಕೇವಲ ಎರಡೂವರೆ ರೂಪಾಯಿ ಹೆಚ್ಚಳವಾಗಿದೆ. ಅದೇ ನಂದಿನಿ ಹಾಲನ್ನು ಗ್ರಾಹಕರು ಹೆಚ್ಚು ಹಣ ಕೊಟ್ಟು ಖರೀದಿಸಬೇಕಾಗಿದೆ. ರೈತ ಕೇಳುವುದು ಇಷ್ಟೇ. ಕೊಳ್ಳುವ ಸಾಮರ್ಥ್ಯ ಇರುವ ಗ್ರಾಹಕರಿಗೆ ಹೆಚ್ಚು ದರ ನಿಗದಿಪಡಿಸಿ. ಹಾಗೆಯೇ ಹಾಲು ಖರೀದಿ ದರವನ್ನು ಹೆಚ್ಚಿಸಿ. ಸಬ್ಸಿಡಿ ಶಾಶ್ವತವಲ್ಲ. ಹಿಂದೆ ಐದು ರೂಪಾಯಿವರೆಗೆ ಹಾಲಿನ ಸಬ್ಸಿಡಿ ಕೊಟ್ಟು ನಂತರ ಎರಡು ರೂಪಾಯಿ ಇಳಿಸಿದ್ದಿದೆ. ಇದಕ್ಕಾಗಿ ಖರೀದಿ ದರವನ್ನೇ ಶಾಶ್ವತವಾಗಿ ನಿಗದಿ ಪಡಿಸಿ. ಪಶು ಆಹಾರಗಳ ದರ ನಿಷ್ಕರ್ಷೆ ಮಾಡಿ ಎನ್ನುವುದು. ಈಗ ಅಮೂಲ್ ಕರ್ನಾಟಕ ಮಾರುಕಟ್ಟೆ ಪ್ರವೇಶದ ಬಗ್ಗೆ, ಅಥವಾ ಅಮೂಲ್ ನಂದಿನಿಯನ್ನು ಕಬಳಿಸುತ್ತದೆ ಎನ್ನುವ ಗುಲ್ಲು ಎದ್ದಿದೆಯಲ್ಲ, ಈ ಬಗ್ಗೆ ಹಾಲು ಉತ್ಪಾದಕರ ದೃಷ್ಟಿಕೋನವೇ ಬೇರೆ. ರಾಜ್ಯದ ಗಡಿ ಭಾಗಗಳಲ್ಲಿ ಖಾಸಗಿ ಡೇರಿಗಳು ಹೆಚ್ಚು ಹಣ ಕೊಟ್ಟು ಹಾಲು ಖರೀದಿಸುತ್ತಿವೆ. ಹಾಗಾಗಿಯೇ ಅವುಗಳಿಗೆ ಮಾರುತ್ತಿದ್ದಾರೆ. ವಿಶೇಷವಾಗಿ ಮಹಾರಾಷ್ಟ್ರ ರಾಜ್ಯದ ಖಾಸಗಿ ಡೇರಿಗಳಿಗೆ ಹೆಚ್ಚು ಹಾಲು ಪೂರೈಕೆಯಾಗುವುದು ಕರ್ನಾಟಕದ ಗಡಿ ಭಾಗಗಳಿಂದಲೇ. ಹಾಗೆಯೇ ಕರ್ನಾಟಕಕ್ಕೆ ಸುಮಾರು ೬೪ ಬ್ರ್ಯಾಂಡಿನ ಹಾಲು ಹೊರ ರಾಜ್ಯಗಳ ಡೇರಿಗಳಿಂದ ಪೂರೈಕೆಯಾಗುತ್ತಿದೆ. ಅಮೂಲ್ ತನ್ನ ಉತ್ಪನ್ನಗಳನ್ನು ಎರಡು ದಶಕಗಳ ಹಿಂದೆಯೇ ಮಾರುಕಟ್ಟೆಯಲ್ಲಿ ಬಿಟ್ಟಿದೆ. ಹಾಗೇ ಗುಜರಾತ್ ಡೇರಿ ತನ್ನ ಐಸ್‌ಕ್ರೀಮ್, ಮಖನ್ (ಬೆಣ್ಣೆ) ಇತ್ಯಾದಿಗಳನ್ನು ಕರ್ನಾಟಕದ ಕೆಎಂಎಫ್ ಡೇರಿಗಳಲ್ಲೇ ಉತ್ಪಾದಿಸುತ್ತಿದೆ. ಇದಕ್ಕೆಲ್ಲ ಅವಕಾಶ ನೀಡಿದ್ದು ಈಗ ಬೊಬ್ಬೆ ಹೊಡೆಯುತ್ತಿರುವ ನಾಯಕರಿರುವ ಸರ್ಕಾರವೇ! ಇದೆಲ್ಲಕ್ಕಿಂತಲೂ ಹೆಚ್ಚಾಗಿ ಕೆಎಂಎಫ್ ಹುಟ್ಟಿ ಬೆಳೆದದ್ದೇ ಅಮೂಲ್ ಮದರ್ ಡೇರಿಯ ಸಹಕಾರದಿಂದ. ಸ್ವತಃ ಶ್ವೇತಕ್ರಾಂತಿ ಹರಿಕಾರ ಕುರಿಯನ್ ಸಹಕಾರಿ ತತ್ವದಲ್ಲಿ ಕರ್ನಾಟಕಕ್ಕೆ ಕ್ಷೀರೋದ್ಯಮವನ್ನು ಪರಿಚಯಿಸಿ ಪ್ರತ್ಯೇಕ ಹಾಲು ಒಕ್ಕೂಟ ರಚಿಸುವುದರ ಜೊತೆಗೆ, ಹಾಲು ಡೇರಿಗಳಿಗೆ ಅಗತ್ಯವಾದ ತಂತ್ರಜ್ಞಾವನ್ನು ಒದಗಿಸಿಕೊಟ್ಟರು. ಅದಕ್ಕಾಗಿಯೇ ಕುರಿಯನ್ ನಂದಿನಿ ಹಾಲಿನ ಕೆಎಂಎಫ್ ಘಟಕದ ಉದ್ಘಾಟನೆಗೆ ವಿಶೇಷ ಅತಿಥಿಯಾಗಿದ್ದರು. ಹಾಗೇ, ಅಮೂಲ್ ಮತ್ತು ಕೆ.ಎಂಎಫ್ ಎರಡೂ ಸಹಕಾರಿ ಕಾಯ್ದೆಯಡಿ ಪ್ರತ್ಯೇಕ ಸ್ಥಾಪನೆಯದವು. ಎರಡೂ ಅಂತರಾಜ್ಯ ಮತ್ತು ಬಹುರಾಜ್ಯ ಪರವಾನಿಗೆ ಪಡೆದವು. ಇದೆಲ್ಲ ಗೊತ್ತಿಲ್ಲ ಅಂತಲ್ಲ ಇವತ್ತಿನ ರಾಜಕಾರಣಿಗಳಿಗೆ. ಆದರೆ ಈಗ ಚುನಾವಣೆಯ ಸಮಯ. ಶ್ವೇತ ಶುಭ್ರತೆಯಲ್ಲೇ ಹುಳಿ- ಕಪ್ಪು ಬೆರೆಸುವ ಕಾಲ. ಹಾಗೆ ನೋಡಿದರೆ ಕರ್ನಾಟಕದ ನಂದಿನಿ ಉತ್ಪಾದನೆಗಳು ದಕ್ಷಿಣ ಭಾರತ ಮಾತ್ರವಲ್ಲ. ಮಹಾರಾಷ್ಟ್ರ ಗುಜರಾತ್, ಬಿಹಾರಗಳಿಗೂ ಹೋಗುತ್ತಿವೆ. ಅಮೂಲ್ ಭಾರತದ ಹಾಲು ಮಾರುಕಟ್ಟೆಯ ಅತೀ ದೊಡ್ಡ ಹಿಡಿತ ಸಾಧಿಸಿದ್ದರೆ, ಕೆಎಂಎಫ್ ದೇಶದ ಎರಡನೇ ಸ್ಥಾನದಲ್ಲಿದೆ. ರೈತರೂ ಪೈಪೋಟಿ ಕಂಡಿಲ್ಲ. ಗ್ರಾಹಕರೂ ಪೈಪೋಟಿ ನೋಡಿಲ್ಲ. ಇದಕ್ಕೆ ಇಳಿದಿಲ್ಲ. ಆದರೆ ಹಾಲಿನ ನೆಪದಲ್ಲಿ ರಾಜಕಾರಣಿಗಳ ಪೈಪೋಟಿ ಶುರುವಾಗಿದೆ. ಇತ್ತೀಚಿಗಷ್ಟೇ ದನಕರಗಳು ಚರ್ಮಗಂಟು ರೋಗದಿಂದ ಬಸವಳಿದವು. ಲಕ್ಷಾಂತರ ದನಕರುಗಳು ಸತ್ತವು. ಎಷ್ಟೇ ಬಡಾಯಿ ಕೊಚ್ಚಿಕೊಂಡರೂ ಕರ್ನಾಟಕದ ಪಶು ವೈದ್ಯರಿಂದ ನಿಯಂತ್ರಣ ಸಾಧ್ಯವಾಗಿಲ್ಲ. ಕಾರಣ, ಪಶು ವೈದ್ಯರೇ ಇಲ್ಲ. ಇದ್ದ ಪಶುವೈದ್ಯರಿಗೆ ಗಂಟು ರೋಗ ನಿವಾರಣೆಯ ಬಗ್ಗೆ ಮಾಹಿತಿ ಇಲ್ಲ. ಸಂಸತ್ತಿನಲ್ಲಿ ಈ ಬಗ್ಗೆಯೂ ಪ್ರಸ್ತಾಪವಾದಾಗ ನೆರವಿಗೆ ಧಾವಿಸಿದ್ದು ಗುಜರಾತ್
ಮದರ್ ಡೇರಿ’ ಹಾಗೂ ಪಶು ಚಿಕಿತ್ಸೆ, ಸಂರಕ್ಷಣೆ ಕುರಿತು ವಿಧಿ ವಿಧಾನ ತಿಳಿಸಿದ ಆಯುರ್ವೇದ, ಹಳ್ಳಿಯ ಗಾಂವಟಿ ವೈದ್ಯರು !
ಗಂಟು ರೋಗ ಭಾಧಿಸಿದಷ್ಟು ಹೈನೋದ್ಯಮಕ್ಕೆ ಇನ್ನೊಂದು ರೋಗ ಕಾಡಿಲ್ಲ. ಈ ನಡುವೆ, ಪ್ರಸಕ್ತ ಸಾರೆ ಒಣ ಹುಲ್ಲು, ಕರಡ ಇತ್ಯಾದಿಗಳ ಕೊರತೆ. ಗೌಳಿ ಸಮುದಾಯ ಹಾಲು ಉತ್ಪನ್ನವನ್ನೇ ನಂಬಿಕೊಂಡು ಬದುಕುವವರು. ಬೇಣ, ಗೋಮಾಳ ಬೋಳಾದರೆ, ಮರದ ಸೊಪ್ಪು ಒಣಗಿದರೆ ಹಾಲಿನ ಕೊರತೆ ಕಾಣುತ್ತಾರೆ. ಅವರ ಬದುಕೂ ಬಡವಾಗುತ್ತದೆ. ಹಸಿರು ಸೊಪ್ಪು ಕಡಿದು ತಿನಿಸುವ, ಹಸಿ ಹುಲ್ಲು ಉಣಿಸುವ ಮಂದಿಗೆ ಈಗಿರುವುದು ಬೋಳು ಗುಡ್ಡ ಮಾತ್ರ.
ಪಶುಗಳ ಹಾಸ್ಟೆಲ್ ಮಾಡುವ, ಪಶು ಚಿಕಿತ್ಸೆಗೆ ಅಂಬ್ಯೂಲೆನ್ಸ್ ಘೋಷಿಸಿದ ಸರ್ಕಾರದಿಂದ ಈ ಗೌಳಿಗಳಿಗೆ ಯಾವ ನೆರವೂ ಸಿಗಲಿಲ್ಲ. ಹಾಗಂತ, ಅವರ ಬದುಕಿನ ಪ್ರಶ್ನೆಯನ್ನು ಎತ್ತಿದವರಿಲ್ಲ. ಈಗ ಹಾಲು ಉತ್ಪಾದನೆ ಬೇಸಿಗೆಯಲ್ಲಿ ಕಡಿಮೆಯಾಗಿದೆ. ಶ್ವೇತ ಕ್ರಾಂತಿಯ ನೆಲದಲ್ಲಿ ಹಾಲಾಹಲ ಎಬ್ಬಿಸುವ ಚುನಾವಣೆ ಬಂದಿದೆ. ಗೌಳಿ, ಗೋಪಾಲಕ, ಪಶು ಹೈನೋದ್ಯಮದಲ್ಲಿ ತೊಡಗಿಕೊಂಡವರು ಭವಿಷ್ಯತ್ತಿನ ಬದುಕಿನ ಬಗ್ಗೆ ಚಿಂತಿಸುತ್ತಿದ್ದಾರೆ.
ಕೊನೆಯ ಹನಿ: ಅಮೂಲ್ ನಂದಿನಿ ಬ್ರ್ಯಾಂಡ್ ಜಗಳ ಎದ್ದಿರುವ ಈ ಸಂದರ್ಭದಲ್ಲಿ ವಾಟ್ಸಪ್ ಸಂದೇಶವೊಂದು ಹರಿದಾಡುತ್ತಿದೆ. `ಹಾಲಿನ ಬ್ರ್ಯಾಂಡ್ ಬಗ್ಗೆ ಜಗಳವಾಡುವವರು, ಆಲ್ಕೋಹಾಲ್ ಬ್ರ್ಯಾಂಡ್ ಹೆಚ್ಚಿಸಿದಷ್ಟೂ ಖುಷಿ ಪಡುವುದೇಕೆ? ಯಾವ ಕಂಪನಿ ಯಾವ ಬ್ರ್ಯಾಂಡ್ ಅಲ್ಕೋಹಾಲ್ ಎಲ್ಲಿಂದಲಾದರೂ ತರಲಿ ಸ್ವಾಗತಿಸುತ್ತಾರೆ!
ಎಷ್ಟು ವಾಸ್ತವವಲ್ಲವೇ…!?