ಬಳ್ಳಾರಿ: ಹಳೆಯ ಶ್ರೀರಾಮುಲು ಬಗ್ಗೆ ಗೊತ್ತಿಲ್ಲ. ಗೊತ್ತಿದ್ದರೆ ಇಂದು ವೇದಿಕೆಗಳಲ್ಲಿ ಯಾರೊಬ್ಬರೂ ಮಾತನಾಡುತ್ತಿರಲಿಲ್ಲ. ಮುಂಬರುವ ಚುನಾವಣೆಯಲ್ಲಿ ಶ್ರೀರಾಮುಲು ಅವರ ಹಳೆಯ ಅವತಾರ ತೆಗೆಯಲಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ಸಿಂಗ್ ಹೇಳಿದರು.
ನಗರದ ಹೊರವಲಯದ ಖಾಸಗಿ ಸಭಾಂಗಣದಲ್ಲಿ ಶನಿವಾರ ನಡೆದ ಎಸ್‌ಟಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದ ಅವರು, ಸಚಿವ ಶ್ರೀರಾಮುಲು ಅವರು ತಮ್ಮ ಆತ್ಮವಿಶ್ವಾಸ ಮತ್ತು ಸರ್ಕಾರದ ಮೇಲಿನ ನಂಬಿಕೆಯಿಂದ ಮೀಸಲಾತಿಯನ್ನು 24 ಗಂಟೆಯೊಳಗೆ ಕೊಡಿಸುವುದಾಗಿ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದಿದ್ದರು. ಆದರೆ, ತಾಂತ್ರಿಕ ತೊಂದರೆಯಿಂದ ಅದು ಸಾಧ್ಯವಾಗಿಲ್ಲ. ಅದನ್ನೇ ನೆಪವಾಗಿಸಿಕೊಂಡು ಎಲ್ಲರೂ ಮಾತನಾಡುವವರೇ ಆಗಿದ್ದಾರೆ. ಅವರಿಗೆ ಹಳೆಯ ಶ್ರೀರಾಮುಲು ಬಗ್ಗೆ ಗೊತ್ತಿಲ್ಲ. ಗೊತ್ತಿದ್ದರೆ ಮಾತನಾಡುತ್ತಿರಲಿಲ್ಲ. ಮೀಸಲಾತಿ ವಿಷಯದಲ್ಲಿ ಟೀಕೆ ಮಾಡುವವರಿಗೆ ಮುಂದಿನ ಚುನಾವಣೆಯಲ್ಲಿ ಜನರೇ ತಕ್ಕಪಾಠ ಕಲಿಸಲಿದ್ದಾರೆ ಎಂದರು.