ವಿಜಯಪುರ: ಹಣಬಲ, ತೋಳ್ಬಲ, ಹೆಂಡದ ಬಲ ಪ್ರಯೋಗಿಸಿ ಅಧಿಕಾರಕ್ಕೆ ಬರುವ ಕನಸು ಕಾಣುವುದನ್ನು ಕಾಂಗ್ರೆಸ್ ಬಿಡಬೇಕು. ರಾಜ್ಯದಲ್ಲಿ ಒಬ್ಬ ನಾಯಕ ತಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಕನಸು ಕಾಣುತ್ತಿದ್ದಾನೆ, ಅದು ಕೇವಲ ತಿರುಕನ ಕನಸು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವ್ಯಂಗ್ಯವಾಡಿದರು.
ಸಿಂದಗಿಯಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಅಭಿಯಾನದಲ್ಲಿ ಮಾತನಾಡಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ೧೪೦ಕ್ಕೂ ಅಧಿಕ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದರು. ಪ್ರಧಾನಿ ನರೇಂದ್ರ ಮೋದಿ, ಜೆ.ಪಿ. ನಡ್ಡಾ ಅವರಿಗೆ ಸರಿಸಮಾನವಾದ ಯಾವ ನಾಯಕರೂ ಕಾಂಗ್ರೆಸ್‌ನಲ್ಲಿ ಇಲ್ಲ ಎಂದರು.
ಅಧಿಕಾರವಿದ್ದಾಗ ನಾಟಕ ಮಾಡಿ, ತಮ್ಮ ತಮ್ಮಲ್ಲೇ ಕಚ್ಚಾಡಿಕೊಂಡು ಕಾಂಗ್ರೆಸ್ ಜನತೆಗೆ ದೊಡ್ಡ ದ್ರೋಹ ಮಾಡಿದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಸ್ತಿತ್ವದಲ್ಲಿಯೇ ಇರುವುದಿಲ್ಲ. ನಾಯಕರೇ ಇಲ್ಲದ ಕಾಂಗ್ರೆಸ್ ಪಕ್ಷವನ್ನು ಜನತೆ ಮರೆಯುತ್ತಿದ್ದಾರೆ. ಅಲ್ಪಸಂಖ್ಯಾತರಾದಿಯಾಗಿ ಸಕಲರಿಗೂ ಸೌಲಭ್ಯಗಳು ಸಿಗಬೇಕು ಎನ್ನುವುದು ಮೋದಿಜಿ ಅವರ ಆಶಯ ಎಂದರು.