ಸ್ವಾಭಿಮಾನಕ್ಕೆ ಧಕ್ಕೆಯಾದರೆ ಬಿಡುವುದಿಲ್ಲ

d k shivakumar
Advertisement

ಮಂಡ್ಯ : ‘ಉರಿಗೌಡ, ದೊಡ್ಡನಂಜೇಗೌಡ ವಿಚಾರದಲ್ಲಿ ಬಿಜೆಪಿ ಮುಖಂಡರು ಒಕ್ಕಲಿಗ ಸಮುದಾಯಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಬಿಡುವುದಿಲ್ಲ, ಇದರ ವಿರುದ್ಧ ಹೋರಾಟ ನಡೆಸುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಂಗಳವಾರ ಹೇಳಿದರು.

ಅಮಾವಾಸ್ಯೆ ಪೂಜೆ ಅಂಗವಾಗಿ ನಾಗಮಂಗಲ ತಾಲ್ಲೂಕು ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ದ ಅವರು ಡಾ.ನಿರ್ಮಲಾನಂದನಾಥ ಸ್ವಾಮೀಜಿ ಜೊತೆ ಮಾತುಕತೆ ನಡೆಸಿ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.

‘ಬಿಜೆಪಿ ಮುಖಂಡರೇ ಉರಿಗೌಡ, ನಂಜೇಗೌಡರಾಗಿದ್ದಾರೆ. ಈ ವಿಚಾರದಲ್ಲಿ ಸ್ವಾಭಿಮಾನಕ್ಕೆ ಧಕ್ಕೆಯಾದರೆ ನಾವು ಸುಮ್ಮನೆ ಕೂರುವುದಿಲ್ಲ, ನಾವ್ಯಾರೂ ಹೇಡಿಗಳಲ್ಲ. ಹೋರಾಟದ ನೇತೃತ್ವ ವಹಿಸಿಕೊಳ್ಳುವಂತೆ ಸ್ವಾಮೀಜಿಯಲ್ಲಿ ಮನವಿ ಮಾಡಿದ್ದೇನೆ. ಒಂದು ಪಕ್ಷದ ಅಧ್ಯಕ್ಷನಾಗಿ ನಾನೂ ಹೋರಾಟದಲ್ಲಿ ಪಾಲ್ಗೊಳ್ಳುತ್ತೇನೆ’ ಎಂದರು.

‘ಸಿ.ಟಿ.ರವಿ, ಆರ್‌.ಅಶೋಕ್‌, ಅಶ್ವತ್ಥ ನಾರಾಯಣ ಹೊಸದಾಗಿ ಕತೆ ಬರೆಯುತ್ತಾರಂತೆ. ಇನ್ಯಾವನೋ ಒಬ್ಬ ಸಿನಿಮಾ ತೆಗೆಯುತ್ತಾನಂತೆ. ಸ್ವಾಮೀಜಿಗಳು ಅವನನ್ನು ಕರೆದು, ಕೂರಿಸಿ ಮಾತನಾಡಿದ್ದೇ ತಪ್ಪು. ಮುನಿರತ್ನ ಒಬ್ಬ ವ್ಯಾಪಾರಿ, ನಮ್ಮ ಒಕ್ಕಲುತನಗಳ ಬಗ್ಗೆ ನೂರು ಸಿನಿಮಾ ಮಾಡಲಿ. ಆದರೆ ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ನಾವು ಸುಮ್ಮನಿರಲು ಸಾಧ್ಯವಿಲ್ಲ’ ಎಂದರು.