ಸ್ಕೌಟ್ಸ್ ಗೈಡ್ಸ್ ಸಾಂಸ್ಕೃತಿಕ ಜಾಂಬೂರಿ-ನೂರು ಎಕರೆ ಪ್ರದೇಶದಲ್ಲಿ ಸಕಲ ಸಿದ್ಧತೆ

Advertisement

ಮೂಡುಬಿದಿರೆ: ಇದೇ ಮೊದಲ ಬಾರಿಗೆ ಭಾರತದಲ್ಲಿ ಆಯೋಜನೆ ಮಾಡಲಾಗಿರುವ ಸ್ಕೌಟ್ಸ್ ಅಂಡ್ ಗೈಡ್ಸ್‌ನ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ಮೂಡುಬಿದಿರೆಯ ಅಳ್ವಾಸ್ ಕ್ಯಾಂಪಸ್‌ನ ನೂರು ಎಕರೆ ಪ್ರದೇಶದಲ್ಲಿ ಎಲ್ಲಾ ರೀತಿಯ ಸಿದ್ಧತೆಗಳು ಭರದಿಂದ ನಡೆಯುತ್ತಿದೆ ಎಂದು ಸ್ಕೌಟ್ಸ್ ಗೈಡ್ಸ್‌ನ ಜಿಲ್ಲಾ ಆಯುಕ್ತ, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ತಿಳಿಸಿದ್ದಾರೆ.
ಆಳ್ವಾಸ್ ಕ್ಯಾಂಪಸ್‌ನಲ್ಲಿ ಡಿ. 21 ರಿಂದ 27ರ ವರೆಗೆ ನಡೆಯಲಿರುವ ಅಂತಾರಾಷ್ಟ್ರೀಯ ಸ್ಕೌಟ್ಸ್ ಗೈಡ್ಸ್ ನ ಸಾಂಸ್ಕೃತಿಕ ಜಾಂಬೂರಿಗಾಗಿ ಆಳ್ವಾಸ್ ಕ್ಯಾಂಪಸ್‌ನ ಬೇರೆ ಬೇರೆ ವೇದಿಕೆಗಳಲ್ಲಿ ಮತ್ತು ಮೈದಾನಗಳಲ್ಲಿ ಹಾಗೂ ಅರಣ್ಯ ಭಾಗದಲ್ಲಿ ಆಯೋಜಿಸಲಾಗುತ್ತಿರುವ ಸಂಬಂಧಪಟ್ಟ ಸಿದ್ಧತೆಗಳನ್ನು ಆಯಾ ಸ್ಥಳಗಳಿಗೆ ಮಾಧ್ಯಮ ಪ್ರತಿನಿಧಿಗಳನ್ನು ಕರೆದೊಯ್ದು ವಿವರ ನೀಡಿದರು.
೫೦ ಸಾವಿರ ವಿದ್ಯಾರ್ಥಿಗಳು ಮತ್ತು 10 ಸಾವಿರ ಶಿಕ್ಷಕರು ಮೂರುವರೆ ಸಾವಿರ ಸ್ವಯಂ ಸೇವಕರು ಈ ಕಾರ್ಯಕ್ರಮದಲ್ಲಿ ಭಾಗಿಗಳಾಗುತ್ತಿದ್ದಾರೆ. 10 ಹೊರದೇಶಗಳ ಸೌಟ್ಸ್ ಅಂಡ್ ಗೈಡ್ಸ್ ಪ್ರತಿನಿಧಿಗಳು ಈ ಜಾಂಬೂರಿಯಲ್ಲಿ ಭಾಗವಹಿಸುತ್ತಿದ್ದಾರೆ.
ಮೂಡುಬಿದಿರೆಯ ಅಳ್ವಾಸ್ ಕ್ಯಾಂಪಸ್‌ನಲ್ಲಿ ಎಲ್ಲಾ ಸಿದ್ಧತೆಗಳನ್ನು ಭರದಿಂದ ನಡೆಯುತ್ತಿದ್ದು ವಿಜ್ಞಾನ ಮೇಳ, ಕೃಷಿ ಮೇಳ, ಕಲಾ ಮೇಳ, ಸಾಂಸ್ಕತಿಕ, ಕ್ರೀಡಾ ಮೇಳ ಹೀಗೆ ಒಟ್ಟು 5 ಹೊಸ ಮೇಳಗಳನ್ನು ಸಂಯೋಜನೆ ಮಾಡಲಾಗಿದ್ದು, ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಜಾಂಬೂರಿಯಲ್ಲಿ ಪರಿಚಯಿಸಲಾಗುತ್ತಿದೆ ಎಂದು ವಿವರ ನೀಡಿದರು.


ಈ ಅಂತಾರಾಷ್ಟ್ರೀಯ ಜಾಂಬೂರಿ ಭಾರತದ ಪ್ರತಿಷ್ಠೆಯ ಕಾರ್ಯಕ್ರಮವಾಗಿದ್ದು, ಕಾರ್ಯಕ್ರಮವನ್ನು ಯಶಸ್ಸುಗೊಳಿಸುವ ನಿಟ್ಟಿನಲ್ಲಿ ಕರ್ನಾಟಕದ ಜನತೆ ಹಾಗೂ ಜನಪ್ರತಿನಿಧಿಗಳು ಮತ್ತು ಕಂಪೆನಿಗಳು ಸಂಘ ಸಂಸ್ಥೆಗಳು ಉದಾರ ಮನಸ್ಸಿನಿಂದ ಕೊಡುಗೆಗಳನ್ನು ನೀಡಬೇಕೆಂದರು.
ಆರ್ಥಿಕ ಸಹಾಯದ ಜೊತೆಗೆ ಊಟೋಪಚಾರಕ್ಕೆ ಸಂಬಂಧಪಟ್ಟ ಸ್ವತ್ತುಗಳನ್ನು ಹೊರೆಕಾಣಿಕೆಯ ರೂಪದಲ್ಲಿ ಕೊಡುಗೆಯಾಗಿ ನೀಡುವಂತೆ ಡಾ. ಎಂ. ಮೋಹನ್ ಆಳ್ವ ಮನವಿ ಮಾಡಿ, ಈ ಜಾಂಬೂರಿಯಲ್ಲಿ ಸಂಗ್ರಹವಾದ ಮೊತ್ತದಲ್ಲಿ ಖರ್ಚು ಮುಗಿದು ಉಳಿಕೆಯಾದ ಹಣದಲ್ಲಿ ಮಂಗಳೂರಿನ ಪಿಲಿಕುಳ ನಿಸರ್ಗಧಾಮದ 15 ಎಕರೆ ಜಾಗದಲ್ಲಿ ಈ ಅಂತಾರಾಷ್ಟ್ರೀಯ ಸಾಂಸ್ಕತಿಕ ಜಾಂಬೂರಿಯ ಸ್ಮರಣಾರ್ಥವಾಗಿ ಯುವ ತರಬೇತಿ ಕೇಂದ್ರವನ್ನು ನಿರ್ಮಿಸುವ ಉದ್ದೇಶವನ್ನು ಇರಿಸಿಕೊಳ್ಳಲಾಗಿದೆ ಈ ಕಾರಣಕ್ಕಾಗಿ ಈ ಜಾಂಬೂರಿಗೆ ಜನತೆ ಉದಾರ ಮನಸ್ಸಿನಿಂದ ಕೊಡುಗೆ ನೀಡುವಂತೆ ಮನವಿ ಮಾಡಿದರು.