ಬೆಳಗಾವಿ: 1 ವರ್ಷ, 10 ತಿಂಗಳ ಹಿಂದೆ ನಡೆದಿದ್ದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪರಾಭವಗೊಂಡು ಮರು ಮತ ಎಣಿಕೆಗೆ ಕೋರ್ಟ್ ಮೆಟ್ಟಿಲೇರಿದ್ದ ಅಭ್ಯರ್ಥಿಗೆ ಮತ್ತೆ ಮುಖಭಂಗವಾಗಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಸರಿಯಾಗಿ ಆಗಿಲ್ಲ ಎಂದು ಕೋರ್ಟ್ ಮೊರೆ ಹೋಗಿದ್ದ ಪರಾಜಿತ ಅಭ್ಯರ್ಥಿ ರಾವಸಾಹೇಬ್ ಪಾಟೀಲ್ ಅವರು ನ್ಯಾಯಾಲಯದಲ್ಲಿ ನಡೆದ ಮರು ಮತ ಎಣಿಕೆಯಲ್ಲೂ ಸೋಲು ಅನುಭವಿಸಿ ಮುಖಭಂಗಕ್ಕೊಳಗಾಗಿದ್ದಾರೆ.
2020ರ ಡಿಸೆಂಬರ್ 30ರಂದು ನಡೆದಿದ್ದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಮತ ಎಣಿಕೆ ಸರಿಯಾಗಿಲ್ಲ ಎಂದು ಆರೋಪಿಸಿ, ಅಭ್ಯರ್ಥಿ ರಾವಸಾಹೇಬ್ ಸಂಕೇಶ್ವರದ ಜೆಎಂಎಫ್‌ಸಿ ಕೋರ್ಟ್ ಮೊರೆ ಹೋಗಿದ್ದರು. 505 ಮತ ಪಡೆದು ಪರಾಭವಗೊಂಡಿದ್ದ ರಾವಸಾಹೇಬ್ ಪಾಟೀಲ್ ವಿರುದ್ಧ 506 ಮತ ಪಡೆದು ತವನಪ್ಪ ಹೊಸೂರ ಎಂಬ ಅಭ್ಯರ್ಥಿ ಗೆಲುವು ಸಾಧಿಸಿದ್ದರು.