ಗದಗ(ಲಕ್ಷ್ಮೇಶ್ವರ): ಸೂರ್ಯಚಂದ್ರ ಇರುವವರೆಗೂ ಲಂಬಾಣಿ ಸಮುದಾಯ ಎಸ್ಸಿ ಮೀಸಲು ಪ್ರವರ್ಗದಲ್ಲಿ ಇರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬರದಕಟ್ಟಿ ಗ್ರಾಮದಲ್ಲಿ ಲಂಬಾಣಿ ಸಮುದಾಯದ ಸಮಾವೇಶದಲ್ಲಿ ಮಾತನಾಡಿದ ಅವರು, ಲಂಬಾಣಿ ಸಮುದಾಯ ಸುಸಂಸ್ಕೃತ ಸಮುದಾಯ. ಈ ಸಮುದಾಯ ತಾಂಡಾಗಳಲ್ಲಿ ಇರುವುದರಿಂದ ಅವಕಾಶಗಳು ಸಿಗುತ್ತಿಲ್ಲ. ಈ ಸಮುದಾಯದ ಮಕ್ಕಳು ಬಹಳ ಬುದ್ದಿವಂತರಿದ್ದಾರೆ. ಕಾಶ್ಮಿರದಿಂದ ಕನ್ಯಾಕುಮಾರಿವರೆಗೂ ಇರುವ ಕೆಲವೇ ಸಮುದಾಯಗಳಲ್ಲಿ ಬಂಜಾರ ಸಮುದಾಯವೂ ಒಂದು. ಈ ಸಮುದಾಯ ತನ್ನ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದೆ. ಈ ಸಮುದಾಯದ ತಾಯಂದಿರಿಗೆ ಅಭಿನಂದನೆಗಳು ಎಂದರು.
ಎಲ್ಲ ಸಮುದಾಯಗಳ ಅಭಿಯ ಆದಾಗ ಮಾತ್ರ ಭಾರತ ಅಭಿವೃಧ್ಧಿ ಆಗುತ್ತದೆ. 2008ರಲ್ಲಿ ಯಡಿಯೂರಪ್ಪ ಅವರ ಕಾಲದಲ್ಲಿ ನಾನು ಸಿ.ಎಂ. ಉದಾಸಿ ಅವರು ಸೇರಿ ತಾಂಡಾ ಅಭಿವೃದ್ಧಿ ನಿಗಮ ಮಾಡುವಂತೆ ಒತ್ತಾಯ ಮಾಡಿದ್ದೇವು. ಆಗ ಆರಂಭವಾದ ತಾಂಡಾ ಅಭಿವೃದ್ಧಿ ನಿಗಮದಿಂದ ತಾಂಡಾಗಳಲ್ಲಿ ಸೇವಾಲಾಲ್ ಭವನ, ರಸ್ತೆ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ.
ಲಮಾಣಿ ಸಮುದಾಯವನ್ನು ಎಸ್ಸಿಯಿಂದ ಕೈ ಬಿಡಬೇಕು ಎಂದು ಕಾಂಗ್ರೆಸ್ ಮಹಾನಾಯಕ ತನ್ನ ಶಿಷ್ಯನ ಮೂಲಕ ಸುಪ್ರೀಂ ಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಿದ್ದರು.
ಸೂರ್ಯ ಚಂದ್ರ ಇರುವವರೆಗೂ ಲಂಬಾಣಿ ಸಮುದಾಯ ಎಸ್ಸಿ ಪಟ್ಟಿಯಲ್ಲಿರುತ್ತದೆ. ಅದು ಈಗ ಕೋರ್ಟ್ನಲ್ಲಿದೆ. ನಾನು ಸಂಸತ್ ಸದಸ್ಯನಾದ ಮೇಲೆ ನಿಮ್ಮ ಪರವಾಗಿ ಕೋರ್ಟ್ ನಲ್ಲಿ ಹೋರಾಟ ಮಾಡಿದ್ದೇನೆ ಎಂದರು.
ನ್ಯಾ. ಸದಾಶಿವ ಆಯೋಗದ ಪ್ರಕಾರ ಲಂಬಾಣಿ ಸಮುದಾಯಕ್ಕೆ ಶೇ 3% ಮೀಸಲಾತಿ ನೀಡಬೇಕು ಎಂದು ಶಿಫಾರಸ್ಸು ಮಾಡಿತ್ತು. ಕಾಂಗ್ರೆಸ್ ಸರ್ಕಾರ ಅದನ್ನು ಜಾರಿ ಮಾಡುವುದಾಗಿ ಹೇಳಿದ್ದಾರೆ. ನಾವು ಲಂಬಾಣಿ ಸಮುದಾಯಕ್ಕೆ 4.5% ಮೀಸಲಾತಿ ನೀಡಿದ್ದೇನೆ. ಅದನ್ನು ಕಾನೂನು ಬದ್ದವಾಗಿ ಕೊಡಿಸುವ ಕೆಲಸ ಮಾಡುತ್ತೇನೆ. ಇದು ನನ್ನ ಸಮಾಜ, ಈ ಸಮಾಜವನ್ನು ನಾನು ಯಾವತ್ತೂ ಕೈ ಬಿಡುವುದಿಲ್ಲ. ಶಿಗ್ಗಾವಿ ಸವಣೂರು ಕ್ಷೇತ್ರದಲ್ಲಿ ಲಂಬಾಣಿ ತಾಂಡಾಗಳ ಅಭಿವೃದ್ಧಿ ಮಾಡಿರುವ ರೀತಿಯಲ್ಲಿ ಈ ಭಾಗದ ತಾಂಡಾಗಳನ್ನು ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿದರು.