ಸುಪಾರಿ ಕೊಲೆ: ಶವಕ್ಕಾಗಿ ನಾಲ್ಕು ತಂಡಗಳಲ್ಲಿ ಹುಡುಕಾಟ

CRIME
Advertisement

ಹುಬ್ಬಳ್ಳಿ: ತಂದೆಯೇ ಮಗನ ಕೊಲೆಗೆ ಸುಪಾರಿ ನೀಡಿ ಕೊಲೆ ಮಾಡಿದ ಆರೋಪ ಪ್ರಕರಣದಲ್ಲಿ ತನಿಖೆ ಚುರುಕುಗೊಂಡಿದ್ದು, ಕೊಲೆಯಾದವನ ಶವಕ್ಕಾಗಿ ನಾಲ್ಕು ತಂಡಗಳ ರಚಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಅಖಿಲ್ ಮಹಾಜನಶೇಠ್(30) ಕೊಲೆಯಾದವ. ಖ್ಯಾತ ಉದ್ಯಮಿ ಭರತ್ ಜೈನ್ ಸುಪಾರಿ‌ ನೀಡಿದ್ದರು ಎನ್ನಲಾಗಿದೆ. ಅಲ್ಲದೆ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಮಗ ಕಾಣೆಯಾದ ಕುರಿತು ಪ್ರಕರಣ ಕೂಡ ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಕೇಶ್ವಾಪುರ ಠಾಣೆ ಪೊಲೀಸರು ಇದು ಕಾಣೆಯಲ್ಲ, ಸುಪಾರಿ ಕೊಲೆ ಎಂಬುದನ್ನು ಪತ್ತೆ ಹಚ್ಚಿ ಕೊಲೆ ಆರೋಪದ ಮೇಲೆ ನಾಲ್ವರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಭರತ್ ಮಹಾಜನ್ ಶೇಠ್, ಮಹಾದೇವ ನಲವಾಡ, ಸಲೀಂ ಎಂಬುವರನ್ನು ಬಂಧಿಸಿದ್ದಾರೆ. ಇನ್ನೊಬ್ಬ ಪ್ರಮುಖ ಆರೋಪಿಗಾಗಿ ಬಲೆ ಬೀಸಿದ್ದಾರೆ.
ಆದರೆ ಡಿಸೆಂಬರ್ 1 ರಂದು ಅಖಿಲ್ನನ್ನು ಮನೆಯಿಂದ ಕಾರಿನಲ್ಲಿ ಕರೆದುಕೊಂಡು ಹೋಗಿ ಕಲಘಟಗಿ ಹತ್ತಿರ ಕೊಲೆ ಮಾಡಿರುವ ಕುರಿತು ಎಫ್ಐಆರ್‌ನಲ್ಲಿ ದಾಖಲಾಗಿದ್ದು, ಶವ ಮಾತ್ರ ಇದುವರೆಗೂ ಸಿಕ್ಕಿಲ್ಲ. ಹೀಗಾಗಿ ಶವ ಪತ್ತೆ ಹಚ್ವಲು ಹಾಗೂ ಇನ್ನೊಬ್ಬ ಆರೋಪಿಗಾಗಿ ಕಲಘಟಗಿ, ಕೇಶ್ವಾಪುರ ಪೊಲೀಸ್‌ರು ಸೇರಿ ನಾಲ್ಕು ತಂಡಗಳನ್ನು ರಚಿಸಿ ತನಿಖೆ ಚುರುಕುಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ‌.