ಸುಪಾರಿ ಕೊಟ್ಟು ಮಗನ ಹತ್ಯೆ ಮಾಡಿಸಿದ ತಂದೆ

ಜೈನ್‌
Advertisement

ಹುಬ್ಬಳ್ಳಿ: ತಂದೆಯೇ ಸುಪಾರಿ ಕೊಟ್ಟು ಮಗನನ್ನು ಹತ್ಯೆ ಮಾಡಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಈ ಘಟನೆಯಿಂದಾಗಿ ಅವಳಿ ನಗರದ ಜನತೆ ಬೆಚ್ಚಿ ಬಿದ್ದಿದ್ದಾರೆ.
ಇತ್ತೀಚೆಗೆ ಖ್ಯಾತ ಉದ್ಯಮಿಯೊಬ್ಬರ ಮಗ ನಾಪತ್ತೆಯಾದ ಬಗ್ಗೆ ಕೇಶ್ವಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಾಪತ್ತೆ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದ್ದು, ದೇವರಗುಡಿಹಾಳದ ಉದ್ಯಮಿಯ ತೋಟದ ಮನೆಯಲ್ಲಿ ರವಿವಾರ ತಡರಾತ್ರಿ ಮಗನ ಶವ ಪತ್ತೆಯಾಗಿದೆ.
ಮಗ ನಾಪತ್ತೆಯಾಗಿದ್ದಾನೆ. ದಯವಿಟ್ಟು ಆತನನ್ನು ಹುಡುಕಿಕೊಡಿ ಎಂದು ಹತ್ಯೆಗೀಡಾದ ವ್ಯಕ್ತಿಯ ತಂದೆಯೇ ಈ ಪ್ರಕರಣ ರೂವಾರಿಯಾಗಿದ್ದಾನೆ. ಉದ್ಯಮಿ ಭರತ್ ಜೈನ್‌ ಪುತ್ರ ಅಖಿಲ್ ಜೈನ್ (30) ಹತ್ಯೆಗೀಡಾದ ದುರ್ದೈವಿ. ಅಖಿಲ್ ಕಾಣೆಯಾಗಿದ್ದಾನೆ ಎಂದು ಡಿ.3ರಂದು ಭರತ್‌ ಜೈನ್‌ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ತಂದೆಯ ಮೇಲೆಯೇ ಅನುಮಾನಗೊಂಡು ವಿಚಾರಣೆಗೆ ಒಳಪಡಿಸಿದ ವೇಳೆ, ಮಗನ ಹತ್ಯೆಗೆ ಸ್ಥಳೀಯ ಹಂತಕರಿಗೆ ಸುಪಾರಿ ನೀಡಿದ್ದಾಗಿ ಭರತ್‌ ಒಪ್ಪಿಕೊಂಡಿದ್ದಾರೆ.
ಭರತ್‌ ಅವರ ಹೇಳಿಕೆ ಆಧರಿಸಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮಗನ ಹತ್ಯೆಗೆ ಸುಪಾರಿ ಕೊಟ್ಟಿದ್ದು ಏಕೆ ಎಂಬ ಕಾರಣ ತಿಳಿಯಲು ವಿಚಾರಣೆ ಮಾಡುತ್ತಿದ್ದಾರೆ.