ಬೆಂಗಳೂರು: ವಿಪ್ರ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಕಳೆದ ಹಲವು ವರ್ಷಗಳಿಂದ ಶ್ರಮಿಸುತ್ತಿರುವ ಸಿರಿನಾಡು ಮಹಾಸಭಾದ ಕಾರ್ಯ ಶ್ಲಾಘನೀಯ ಎಂದು ಉನ್ನತ ಶಿಕ್ಷಣ, ವಿಜ್ಞಾನ-ತಂತ್ರಜ್ಞಾನ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಬಣ್ಣಿಸಿದರು.
ಸಿರಿನಾಡು ಬ್ರಾಹ್ಮಣ ಸಮುದಾಯದ ಸಂಘಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಿರಿನಾಡು ಮಹಾಸಭಾದ ವಿಧಾಯಕ ಕಾರ್ಯಗಳಿಗೆ ಬೆನ್ನೆಲುಬಾಗಿ ಸರ್ಕಾರದ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡಲು ತಾವು ಸಿದ್ಧ ಎಂದರು.
ಜಾಗತಿಕ ಮಟ್ಟದಲ್ಲಿ ಎಲ್ಲ ರಂಗಗಳಲ್ಲೂ ಸ್ಪರ್ಧೆ ಎದುರಿಸುವುದು ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ಸಿರಿನಾಡು ಬ್ರಾಹ್ಮಣ ಸಮುದಾಯವು ಪ್ರತಿಭೆಗಳನ್ನು ಗುರುತಿಸಿ ಮನ್ನಣೆ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಮೂಲಕ ನಮ್ಮ ಸಂಸ್ಕೃತಿಯ ಮಹತ್ವವನ್ನು ಸಾರುತ್ತ ಬಂದಿದೆ ಎಂದು ಸಚಿವ ಡಾ. ಅಶ್ವತ್ಥನಾರಾಯಣ ಅವರು ಸಂತಸ ವ್ಯಕ್ತಪಡಿಸಿದರು.