ಸಿದ್ದು ತಾತಾ ಬಾದಾಮಿಯಿಂದ ಸ್ಪರ್ಧಿಸಲಿ..

Advertisement

ಕೆರೂರ(ಗ್ರಾ): ಸಿದ್ದು ತಾತಾ ಬಾದಾಮಿಯಿಂದ ಸ್ಪರ್ಧಿಸಲಿ. ನಮ್ಮ ಮೊದಲ ಮತ ಅವರಿಗೆ ಮೀಸಲು ಎಂದು ಇಲ್ಲಿಯ ಸರಕಾರಿ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿನಿ ವಿದ್ಯಾಶ್ರೀ ದೇಸಾಯಿ ತಿಳಿಸಿದ್ದಾರೆ.
ಆರ್ಥಿಕ ಮುಗ್ಗಟ್ಟಿನಿಂದ ಶಾಲೆಯಿಂದ ದೂರ ಉಳಿದ ಹಾಗೂ ವಿಕಲಚೇತನ ಮಕ್ಕಳ ಮೇಲೆ ಕಾಳಜಿ ತೋರಿ ಸರಕಾರಿ ಪ್ರೌಢಶಾಲೆಯನ್ನು ಆರಂಭಿಸಿ ಕಾಲೇಜು ಶಿಕ್ಷಣಕ್ಕೆ ದಾರಿದೀಪವಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿದ್ಯಾರ್ಥಿಗಳಿಗೆ ಎಲ್ಲ ಸರಕಾರಿ ಸೌಲಭ್ಯಗಳನ್ನು ಒದಗಿಸಿ ಮಾದರಿ ಜನಪ್ರತಿನಿಧಿಯಾಗಿದ್ದಾರೆ.
ಸರಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಶಾಲೆಯಲ್ಲಿ ಆಶ್ರಯ ಪಡೆದಿದ್ದ ಪ್ರೌಢಶಾಲೆಗೆ ಸ್ವಂತ ಕಟ್ಟಡದ ಅವಶ್ಯಕತೆ ಮನಗಂಡ ಸಿದ್ದರಾಮಯ್ಯ ಅವರು ಹುಬ್ಬಳ್ಳಿ ಸೊಲ್ಲಾಪೂರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದ್ದ ಹುಲಮನಿ ಕೈಗಾರಿಕಾ ಪ್ರದೇಶವನ್ನು ಸ್ವಾಧೀನ ಪಡಿಸಿಕೊಂಡು ಅಲ್ಲಿ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಾಣ ಮಾಡಿದ್ದು, ಅದು ಲೋಕಾರ್ಪಣೆಗೆ ಸಿದ್ಧವಾಗಿ ಶಿಕ್ಷಣ ಕಾಶಿಯಾಗಿ ಹೊರಹೊಮ್ಮಲಿದೆ. ಪಟ್ಟಣದ ಶೈಕ್ಷಣಿಕ ಅಭಿವೃದ್ಧಿಗೆ ಸಿದ್ದರಾಮಯ್ಯನವರ ಸೇವೆ ಇನ್ನೂ ಅಗತ್ಯವಿದೆ. ಅವರು ಇನ್ನೊಮ್ಮೆ ಬಾದಾಮಿ ಮತಕ್ಷೇತ್ರದ ಶಾಸಕರಾಗಿ ಆಯ್ಕೆಯಾದರೆ ಶೈಕ್ಷಣಿಕ ಕ್ಷೇತ್ರ ಸೇರಿದಂತೆ ಎಲ್ಲ ರಂಗಗಳ ಅಭಿವೃದ್ದಿ ಆಗುತ್ತದೆಂಬ ನಂಬಿಕೆ ನನ್ನದಾಗಿದೆ.
ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ ಅನೇಕ ವಿದ್ಯಾರ್ಥಿಗಳು ಈಗ ಮತದಾನದ ಹಕ್ಕನ್ನು ಪಡೆದಿದ್ದು, ಉನ್ನತ ಶಿಕ್ಷಣಕ್ಕೆ ದಾರಿ ಮಾಡಿಕೊಟ್ಟ ಸಿದ್ದರಾಮಯ್ಯನವರಿಗೆ ಮುಂಬರುವ ಚುನಾವಣೆಯಲ್ಲಿ ನನ್ನ ಮೊದಲ ಮತವನ್ನು ನೀಡುತ್ತೇನೆ. ಜೊತೆಗೆ ಸ್ನೇಹಿತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೊದಲ ಮತವನ್ನು ಅವರಿಗೆ ನೀಡಲು ಉತ್ಸುಕರಾಗಿದ್ದೇವೆ. ಆದ್ದರಿಂದ ಸಿದ್ದರಾಮಯ್ಯ ಅವರು ಮತ್ತೇ ಬಾದಾಮಿಯಿಂದಲೆ ಸ್ಪರ್ಧಿಸಬೇಕೆಂದು ಆಗ್ರಹಿಸಿದ್ದಾರೆ.