ಬಳ್ಳಾರಿ: ಬಳ್ಳಾರಿ: ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಸಿಎಂ ಬಸವರಾಜ ಬೊಮ್ಮಾಯಿಯವರು ನಾಯಿಮರಿ ಥರ ಮುದುಡಿಕೊಂಡಿರುತ್ತಾರೆ, ಅವರನ್ನು ಕಂಡರೆ ಭಯಪಡುತ್ತಾರೆ, ರಾಜ್ಯಕ್ಕೆ ಬೇಕಾದ ಅನುದಾನ ಪಡೆದುಕೊಳ್ಳಲು ಅವರಿಂದ ಸಾಧ್ಯವಾಗುವುದಿಲ್ಲ ಎಂದು ಟೀಕಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಶ್ರೀರಾಮಲು ಗುಡುಗಿದ್ದಾರೆ. ಬಳ್ಳಾರಿಯಲ್ಲಿ ಮಾತನಾಡಿದ ಅವರು, ಸಿಎಂ ಬಸವರಾಜ ಬೊಮ್ಮಾಯಿ ಬಗ್ಗೆ ಲಘುವಾಗಿ ಮಾತನಾಡಿರೋದಕ್ಕೆ ಸಿದ್ದು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬ ಸಿಎಂ ಅನ್ನ ನಾಯಿ ಮರಿ ಅಂತೀರಾ.. ಇದು ನಿಮ್ಮ ಸಂಸ್ಕೃತಿನಾ? ಸಿದ್ದರಾಮಯ್ಯ ಅವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಸೋನಿಯಾ ಗಾಂಧಿ ಮನೆಯಲ್ಲಿ ಇಲಿ, ಬೆಕ್ಕು ಜಿರಳೆ ತರಹ ಸಿದ್ದರಾಮಯ್ಯ ಇರುತ್ತಾರೆ ಎಂದು ನಾವು ಹೇಳಬಹುದು. ಆದರೆ ನಾವು ಆ ರೀತಿ ಹೇಳುವುದಿಲ್ಲ. ಅದು ನಮ್ಮ ಸಂಸ್ಕೃತಿಯಲ್ಲ. ಸಿಎಂ ಬಗ್ಗೆ ಲಘುವಾಗಿ ಮಾತಾಡೋದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಸಿಎಂ ಆಗಿದ್ದರು, ಇದೀಗ ವಿಪಕ್ಷ ಪಕ್ಷ ನಾಯಕ ಆಗಿದ್ದಾರೆ. ಇಂತಹ ಉನ್ನತ ಸ್ಥಾನದಲ್ಲಿದ್ದು, ಸಿಎಂ ಸ್ಥಾನದ ವ್ಯಕ್ತಿಯನ್ನು ನಾಯಿ ಹೋಲಿಕೆ ಮಾಡುವುದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಸಿಎಂಗೆ ಹೀಗೆ ಮಾತನಾಡುವುದು ಎಷ್ಟು ಸರಿ? ಲಘುವಾಗಿ ಮಾತಾಡೋದು ಕಾಂಗ್ರೆಸ್ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.