ದಾವಣಗೆರೆ: ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆದಂತೆಯೇ ವರುಣಾ ಹಾಗೂ ಕೋಲಾರದಲ್ಲೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲನುಭವಿಸಲಿದ್ದು, ಯಾವುದೇ ಕಾರಣಕ್ಕೂ ವಿಧಾನಸೌಧಕ್ಕೆ ಹೋಗುವುದಿಲ್ಲ ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್ ಭವಿಷ್ಯ ನುಡಿದಿದ್ದಾರೆ.
ದಾವಣಗೆರೆಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಈಗಾಗಲೇ ವರುಣಾ ಟಿಕೆಟ್ ಘೋಷಣೆಯಾಗಿದೆ. ಕೋಲಾರದಲ್ಲೂ ಅವರು ಟಿಕೆಟ್ ಪಡೆಯಬಹುದು. ಮಾಡಿದ ಪಾಪದ ಕೆಲಸಗಳಿಂದಲೇ ಸಿದ್ದರಾಮಯ್ಯ ಸೋಲುಣ್ಣಲಿದ್ದಾರೆ. ಈಗಾಗಲೇ ಸಿದ್ದರಾಮಯ್ಯ ಪಾಪದ ಕೊಡ ತುಂಬಿದ್ದು, ನೆಲ ಕಚ್ಚುವುದು ನಿಶ್ಚಿತ ಎಂದರು.
ವರುಣಾ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಯನ್ನು ಹುಡುಕುತ್ತಿದ್ದೇವೆ. ಇನ್ನು 2 ದಿನದಲ್ಲೇ ಬಿಜೆಪಿ ಅಭ್ಯರ್ಥಿ ಘೋಷಣೆ ಸಹ ಆಗಲಿದೆ. ಸಿದ್ದರಾಮಯ್ಯ ಅವರನ್ನು ಬಿಜೆಪಿ ಅಭ್ಯರ್ಥಿ ಸೋಲಿಸುತ್ತಾರೆ ಎನ್ನುವುದಕ್ಕಿಂತ ಅವರು ಮಾಡಿರುವ ಪಾಪದ ಕೆಲಸಗಳೇ ಅವರನ್ನು ಸೋಲಿಸುತ್ತವೆ ಎಂದರು.
ಇಲ್ಲಿವರೆಗೆ ಮುಖ್ಯಮಂತ್ರಿಯಾಗಿದ್ದವರು ಕ್ಷೇತ್ರ ಬದಲಾವಣೆ ಮಾಡಿರಲಿಲ್ಲ. ಆದರೆ ಸಿದ್ದರಾಮಯ್ಯಗೆ ಸುರಕ್ಷಿತ ಕ್ಷೇತ್ರವೇ ಸಿಗುತ್ತಿಲ್ಲ. ಸ್ವಕ್ಷೇತ್ರದಲ್ಲೇ ನೆಲೆ ಇಲ್ಲ. ಇನ್ನೂ ಸಹ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸಿದ್ದಾರೆ ಎಂದು ಅವರು ಟೀಕಿಸಿದರು.