ಸಿದ್ದರಾಮಯ್ಯ ಚುನಾವಣೆಗೆ ನಿಲ್ಲೋದೇ ಬೇಡ: ಸಂತೋಷ್ ಲಾಡ್

ಸಂತೋಷ ಲಾಡ್
Advertisement

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ ಇಬ್ಬರೂ ಸ್ಪರ್ಧಿಸಬಾರದು ಎಂದು ಹೇಳುವ ಮೂಲಕ ಮಾಜಿ ಸಚಿವ ಸಂತೋಷ ಲಾಡ್ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುವಾಗ ಲಾಡ್ ಅವರಿಂದ ಚಿಮ್ಮಿರುವ ಈ ಮಾತು ರಾಜಕೀಯವಾಗಿ ತೀವ್ರ ಸಂಚಲನ ಮೂಡಿಸಿದೆ. ಸಂತೋಷ ಲಾಡ್ ಸಿದ್ದರಾಮಯ್ಯನವರ ಆಪ್ತ ಬಣದಲ್ಲಿ ಇರುವ ರಾಜಕಾರಣಿ. ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಕಲಘಟಗಿ ಮಾಜಿ ಶಾಸಕ. ಪ್ರಸಕ್ತ ಚುನಾವಣೆಯಲ್ಲೂ ಕಲಘಟಗಿ ಟಿಕೆಟ್‌ಗಾಗಿ ಲಾಡ್ ಇನ್ನಿಲ್ಲದ ಯತ್ನ ಮಾಡುತ್ತಿರುವುದು ಈಗ ಬಹಿರಂಗ ಸತ್ಯ.
೨೦೨೦ರಲ್ಲಿ ಡಿ.ಕೆ.ಶಿವಕುಮಾರ ಕಾಂಗ್ರೆಸ್ ಅಧ್ಯಕ್ಷರಾದ ಮೇಲೆ ಅವರೊಂದಿಗೂ ಆತ್ಮೀಯವಾಗಿ ಒಡನಾಡುತ್ತಿರುವ ಲಾಡ್ ಹೇಳಿಕೆ ಸಹಜವಾಗಿ ರಾಜಕೀಯ ವಲಯದ ಹುಬ್ಬೇರಿಸುವಂತೆ ಮಾಡಿದೆ. ಸಿದ್ದರಾಮಯ್ಯನವರು ಇಡೀ ರಾಜ್ಯ ಸುತ್ತಿ ಪಕ್ಷವನ್ನು ಅಧಿಕಾರಕ್ಕೆ ತರಲು ಕೆಲಸ ಮಾಡಲಿ. ಬೇಸಿಗೆಯಲ್ಲಿ ಚುನಾವಣೆ ಬರಲಿದೆ. ಜೊತೆಗೆ ಸಿದ್ದರಾಮಯ್ಯನವರಿಗೆ ವಯಸ್ಸೂ ಆಗಿದೆ (ಏಜ್ ಫ್ಯಾಕ್ಟರ್)' ಎಂದು ಲಾಡ್ ಹೇಳಿದ್ದಾರೆ. ಸಿದ್ದರಾಮಯ್ಯನವರು ಮಾತ್ರ ಸ್ಪರ್ಧಿಸಬಾರದೇ ಎನ್ನುವ ಪ್ರಶ್ನೆಗೆ,ಡಿ.ಕೆ.ಶಿವಕುಮಾರ್ ಅವರೂ ಇದೇ ದಾರಿಯನ್ನು ಅನುಸರಿಲಿ. ಇಬ್ಬರೂ ಇಡೀ ರಾಜ್ಯ ಸುತ್ತುವುದರಿಂದ ಪಕ್ಷ ಅಧಿಕಾರಕ್ಕೆ ಬರುತ್ತದೆ’ ಎಂಬುದು ಅವರ ಅಭಿಪ್ರಾಯ. ಹಾಗಾದರೆ ಮುಂದಿನ ಮುಖ್ಯಮಂತ್ರಿ ಸ್ಥಾನ? ಎನ್ನುವ ಪ್ರಶ್ನೆಗೆ ಲಾಡ್, `ನಮ್ಮ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಹೈಕಮಾಂಡ್ ನಿರ್ಧಾರ ಮಾಡಿದವರು ಮುಖ್ಯಮಂತ್ರಿಯಾಗುವ ಅವಕಾಶ ಇದ್ದೇ ಇದೆ’ ಎಂದರು.