ಸಿದ್ದರಾಮಯ್ಯ ಆಡಳಿತ ಅವಧಿಯಲ್ಲಿ ಭ್ರಷ್ಟಾಚಾರ: ಅರುಣ್ ಸಿಂಗ್

ಅರುಣ್ ಸಿಂಗ್
Advertisement

ಕಲಬುರಗಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತದ ಅವಧಿಯಲ್ಲಿ ಅತೀ ಹೆಚ್ಚಿನ ಭ್ರಷ್ಟಾಚಾರ ನಡೆದಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.
ಅವರು ಬುಧವಾರ ನಗರದ ಐವನ್ ಇ ಶಾಹಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಬಡವರ ಆಹಾರ ಧಾನ್ಯ ಹಂಚಿಕೆ ಹಗರಣ, ಶಿಕ್ಷಕರ ನೇಮಕಾತಿ ಹಗರಣ ಸೇರಿದಂತೆ ಹಲವು ಹಗರಣಗಳ ಭ್ರಷ್ಟಾಚಾರ ನಡೆದುಹೋಗಿದೆ ಎಂದು ವಾಗ್ದಾಳಿ ನಡೆಸಿದರು.
ನೂರು ಇಲಿ ತಿಂದ ಬೆಕ್ಕು ಹಜ್‌ಗೆ ಹೋದಂಗೆ ಎಂಬಂತಾಗಿದೆ ಸಿದ್ದರಾಮಯ್ಯ ಅವರ ಬಿಜೆಪಿ ಮೇಲಿನ ಆರೋಪ ಎಂದ ಅವರು, ಸಿದ್ದರಾಮಯ್ಯ ಅವರ ಕಾಲದ ಸರ್ಕಾರ ಸಾಕಷ್ಟು ಹಗರಣಗಳ ಸರ್ಕಾರವಾಗಿತ್ತು ಎಂದರು.
ಸಿಎಂ ಬಸವರಾಜ ಬೊಮ್ಮಾಯಿ ಸಿಂಪಲ್(ಕಾಮನ್ ಮ್ಯಾನ್)ಆಗಿದ್ದು, ಅವರು ಸಾಮಾನ್ಯ ವ್ಯಕ್ತಿಗಳನ್ನು ಪ್ರತಿನಿಧಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಮತ್ತು ರಾಜ್ಯದ ಗೌರವವನ್ನು ಹಾಳು ಮಾಡುವ ಕೆಲಸ ಮಾಡುತ್ತಿದೆ. ದೇಶದ ವಿವಿಧೆಡೆ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಜಗಳಗಳು ನಡೆಯುತ್ತಿವೆ ಎಂದ ಅವರು, ಅದೇ ರೀತಿ ಕರ್ನಾಟಕದಲ್ಲೂ ಸಹ ಕಾಂಗ್ರೆಸ್ ನಾಯಕರ ನಡುವೆ ಒಳ ಗುದ್ದಾಟ ನಡೆದಿವೆ ಎಂದರು.