ದಾವಣಗೆರೆ: ಕಾಂಗ್ರೆಸ್, ಜೆಡಿಎಸ್ ಪಕ್ಷ ತೊರೆದು ಅವರ ಅಧಿಕಾರ ಕಿತ್ತುಕೊಂಡೆವು ಎಂಬ ಕಾರಣಕ್ಕಾಗಿ, ಕೆಲವು ಮಹಾನಾಯಕರು ನಮಗೆ ಕೆಟ್ಟ ಹೆಸರು ತರುವ ಹುನ್ನಾರ ನಡೆಸಿರುವುದರಿಂದ ನಾವು ಸಿಡಿ ವಿಷಯವಾಗಿ ಕೋರ್ಟ್‌ನಿಂದ ಸ್ಟೇ ಆರ್ಡರ್ ತಂದಿದ್ದೇವೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದುಶ್ಮನ್ ಕಹಾ ಹೇ ಅಂದ್ರೆ ಬಗಲ್ ಮೇ ಹೈ’ ಅಂದ ಹಾಗೆ ನಮ್ಮ ಅಕ್ಕ-ಪಕ್ಕ, ಹಿಂದೆ-ಮುಂದೆ ಇರುವವರು ಯಾವ ತರ ಇರ್ತಾರೆ ಅಂತ ಹೇಳೋಕಾಗಲ್ಲ. ಸಿಡಿನಲ್ಲಿ ಕೊಂಬು ಇಲ್ಲ, ಏನೂ ಇಲ್ಲ. ಆದರೆ, ಇದು ಎಲೆಕ್ಟ್ರಾನಿಕ್ ಯುಗ ಯಾವ ರೀತಿ ಬೇಕಾದರು ಸೃಷ್ಟಿ ಮಾಡಬಹುದು. ಜನ ಅದನ್ನ ಸರಿಯಾಗಿ ಪರಾಮರ್ಶಿಸದೆ ನಮ್ಮ ಬಗ್ಗೆ ಬಂದ ನೆಗೆಟಿವ್ ವಿಚಾರಗಳನ್ನ ನಂಬಿಬಿಡುತ್ತಾರೆ. ಕಾಂಗ್ರೆಸ್, ಜೆಡಿಎಸ್ ಪಕ್ಷದ ಕೆಲವು ಮಹಾನಾಯಕರು ನಾವು ಆ ಪಕ್ಷ ತೊರೆದು ಬಂದ ಕಾರಣಕ್ಕಾಗಿ ನಮ್ಮ ಮೇಲೆ ಕೆಟ್ಟ ಹೆಸರು ಬರುವಂತೆ ಮಾಡುವ ಹುನ್ನಾರ ನಡೆಸಿದ ಕಾರಣಕ್ಕೆ ಸ್ಟೇ ಆರ್ಡರ್ ತಂದಿದ್ದೇವೆ ಎಂದು ಬಾಂಬೆಗೆ ಹೋದ ಶಾಸಕರು ತಂದಿರುವ ಸ್ಟೇ ಆರ್ಡರ್ ಕುರಿತ ಪ್ರಶ್ನೆಗೆ ಉತ್ತರಿಸಿದರು.