ದಾವಣಗೆರೆ: ಕೊಪ್ಪದಲ್ಲಿ ಸಿಎಂ ಕಾರ್ಯಕ್ರಮದ ವೇಳೆ ಕಪ್ಪು ಬಾವುಟ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿದ್ದ ಕರ್ನಾಟಕ ಕಿಸಾನ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸಚಿನ್ ಮೀಗಾ ಸೇರಿದಂತೆ ಮೂವರನ್ನು ನಗರದಲ್ಲಿ ಭಾನುವಾರ ಬೆಳಿಗ್ಗೆ ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.
ನಗರದ ಬಾಪೂಜಿ ಗೆಸ್ಟ್‌ಹೌಸ್‌ನಲ್ಲಿದ್ದ ಸಚಿನ್ ಮೀಗಾ, ಕಿಸಾನ್ ಕಾಂಗ್ರೆಸ್ ದಾವಣಗೆರೆ ಜಿಲ್ಲಾಧ್ಯಕ್ಷ ಶಿವಗಂಗಾ ಬಸವರಾಜ್, ಮುಖಂಡ ರುದ್ರೇಶ್ ಇವರುಗಳನ್ನು ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆಯಿಂದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಸಿಎಂ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿ, ಪ್ರತಿಭಟಿಸಲು ಮೀಗಾ ಕರೆ ನೀಡಿದ್ದರು. ಈ ಹಿನ್ನಲೆ ದಾವಣಗೆರೆಯಿಂದ ಕೊಪ್ಪಕ್ಕೆ ಹೊರಡಲು ಸಿದ್ದರಾಗಿದ್ದ ವಿಚಾರ ತಿಳಿದು ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಅಡಕೆ ಬೆಳೆಗಾರರ ಸಮಸ್ಯೆ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸಿಲ್ಲ. ರೈತರ ಆತ್ಮಹತ್ಯೆ, ಬೆಳೆ ವಿಮೆ ಪರಿಹಾರ ವಿತರಣೆ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂದು ಸಚಿನ್ ಮೀಗಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.