ಹಾವೇರಿ: ಕನ್ನಡದ ಮೊದಲ ನಿಘಂಟು ರಚಿಸಿದ ರೆವರೆಂಡ್ ಫರ್ಡಿನಾಂಡ್ ಕಿಟೆಲ್ ಅವರ ಕುಟುಂಬಸ್ಥರು ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ಕಸಾಪ ಅಧ್ಯಕ್ಷ ಮಹೇಶ ಜೋಶಿ ನೀಡಿದ ಆಹ್ವಾನದ ಮೇರೆಗೆ ನಗರಕ್ಕೆ ಗುರುವಾರ ಆಗಮಿಸಿದರು.
ಕಿಟೆಲ್ ಅವರ ಮರಿಮೊಮ್ಮಗಳು ಅಲ್ಮತ್ ಮೆಯರ್, ಮರಿಮೊಮ್ಮಗ ಯವೆಸ್ ಪ್ಯಾಟ್ರಿಕ್ ಮೆಯರ್, ಅವರ ಸಂಬಂಧಿ ಜಾನ್ ಫ್ರೆಡ್ರಿಕ್ ಸ್ಟಾರ್ಮರ್ ಗುರುವಾರ ನಗರಕ್ಕೆ ಆಗಮಿಸಿ ಇಲ್ಲಿನ ಸನ್ಮಾನ, ಸಂಸ್ಕೃತಿ, ಸತ್ಕಾರವನ್ನು ಕೊಂಡಾಡಿದರು. ಈ ಹಿಂದೆ ಸಾಹಿತ್ಯ ಸಮ್ಮೇಳನ ದಿನಾಂಕವನ್ನು ನ. 11ರಿಂದ ಮೂರು ದಿನಗಳ ಕಾಲ ನಡೆಸುವ ಕುರಿತು ನಿರ್ಧಾರವಾಗಿತ್ತು. ಸಮ್ಮೇಳನ ಮುಂದೂಡಿಕೆಯಾದರೂ ಕಿಟೆಲ್ ಕುಟುಂಬ ಪೂರ್ವನಿಗದಿತ ಪ್ರವಾಸವನ್ನು ರದ್ದು ಮಾಡದೇ ಕನ್ನಡ ನಾಡಿನ ಸೊಬಗು ಸವಿಯಲು ಆಗಮಿಸಿದೆ.
ಇಲ್ಲಿಯ ದೇವಧರ ಗುರುಕೃಪಾ ಚರ್ಚ್‌ನಲ್ಲಿ ಕಿಟೆಲ್ ಕುಟುಂಬದ ಸದಸ್ಯರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ವೇಳೆ ಮಾತನಾಡಿದ ಕಿಟೆಲ್ ಅವರ ಮರಿಮೊಮ್ಮಗಳು, ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ಸಾಹಿತ್ಯ ಪರಿಷತ್ ಅಧ್ಯಕ್ಷರು ಜರ್ಮನಿಗೆ ಆಗಮಿಸಿ ತಮ್ಮ ಕುಟುಂಬಕ್ಕೆ ಆಹ್ವಾನ ನೀಡಿದ್ದರು. ಇಲ್ಲಿಯ ಜನರು ತೋರುತ್ತಿರುವ ಪ್ರೀತಿ, ಆದರಾತಿಥ್ಯಕ್ಕೆ ಮನಸೋತಿದ್ದೇವೆ. ನೀವು ಹಾಕಿದ ಶಾಲು, ಏಲಕ್ಕಿ ಹಾರ, ಹೂವಿನ ಮಾಲೆ, ಗಿಫ್ಟ್‌ಗಳನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಖುಷಿ ಹಂಚಿಕೊಂಡರು.
ಕಿಟೆಲ್ ಅವರ ಮರಿಮೊಮ್ಮಗ ಯವೆಸ್ ಪ್ಯಾಟ್ರಿಕ್ ಮೆಯರ್ ಮಾತನಾಡಿ, ಇದೇ ಮೊದಲ ಬಾರಿಗೆ ಕನ್ನಡದ ನೆಲದಿಂದ ನಮ್ಮ ಕುಟುಂಬಕ್ಕೆ ಆಹ್ವಾನ ಬಂದಿದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಮ್ಮ ಕುಟುಂಬ ಭಾಗವಹಿಸಲಿದೆ. ಆ ಮೂಲಕ ನಾವು ಕನ್ನಡ ಭಾಷೆಗೆ ಗೌರವ ಸಲ್ಲಿಸಲಿದ್ದೇವೆ. ನಮ್ಮ ಕುಟುಂಬದ ಹಿರಿಯರಾದ ರೆವರೆಂಡ್ ಫರ್ಡಿನಾಂಡ್ ಕಿಟಲ್ ಅವರು ಕನ್ನಡದ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದರು. ಕರ್ನಾಟಕ ಮತ್ತು ಕನ್ನಡದ ಬಗ್ಗೆ ನಾವು ತಿಳಿದುಕೊಂಡಿದ್ದೇವೆ. ನಮ್ಮ ಕುಟುಂಬದವರು ಕನ್ನಡವನ್ನು ಕಲಿಯಲಿದ್ದೇವೆ ಎಂದು ಹೇಳಿದರು.
ಇನ್ನು 10 ದಿನಗಳ ಕಾಲ ಕರ್ನಾಟಕದಲ್ಲೇ ಇರುತ್ತೇವೆ. ಹುಬ್ಬಳ್ಳಿ, ಧಾರವಾಡದ ಕಿಟೆಲ್ ಕಾಲೇಜು, ಮಂಗಳೂರು, ಬೆಂಗಳೂರಿಗೆ ತೆರಳಿ ಕಿಟೆಲ್ ನಡೆದಾಡಿದ ಸ್ಥಳಗಳಿಗೆ ಭೇಟಿ ನೀಡಲಿದ್ದೇವೆ. ಜನವರಿಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದಲ್ಲೂ ನಮ್ಮ ಕುಟುಂಬದವರು ಭಾಗಿಯಾಗಲಿದ್ದೇವೆ ಎಂದರು.