ಯಲ್ಲಾಪುರ: ತಾಲ್ಲೂಕಿನ ಸಾತೊಡ್ಡಿ ಜಲಪಾತಕ್ಕೆ ಭಾನುವಾರ ಪ್ರವಾಸಕ್ಕೆಂದು ಬಂದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಹುಬ್ಬಳ್ಳಿಯ ಪೋತುಲ್ ರಾಮನೇಂದ್ರ ರಾವ್(50). ಇವರ ಮೃತದೇಹವು ಸೋಮವಾರ ಪತ್ತೆಯಾಗಿದೆ. ಇವರು ಪತ್ನಿ ಹಾಗೂ ಇಬ್ಬರು ಮಕ್ಕಳು, ತಂಗಿ ಮತ್ತು ಸ್ನೇಹಿತರೊಂದಿಗೆ ಜಲಪಾತಕ್ಕೆ ಪ್ರವಾಸಕ್ಕೆಂದು ಬಂದಿದ್ದರು. ಆಂಧ್ರಪ್ರದೇಶ ಮೂಲದವರಾದ ಇವರು ಹುಬ್ಬಳ್ಳಿಯಲ್ಲಿ ರೈಲ್ವೇ ಕಾಮಗಾರಿ ಗುತ್ತಿಗೆದಾರರಾಗಿದ್ದರು ಎಂದು ತಿಳಿದು ಬಂದಿದೆ .
ತಮ್ಮ ಮಗನೊಂದಿಗೆ ನೀರಿಗಿಳಿದಿದ್ದ ಇವರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದರು. ರಕ್ಷಿಸಲು ಸ್ಥಳೀಯರು, ಉಳಿದ ಪ್ರವಾಸಿಗರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಮಗನು ಬದುಕುಳಿದಿದ್ದು ಅಪಾಯದಿಂದ ಪಾರಾಗಿದ್ದಾನೆ.
ವಿಷಯ ತಿಳಿದ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ನಾರಾಯಣ ಭಟ್ಟ ಕಂಚನಳ್ಳಿ, ಸಮಿತಿಯ ಸದಸ್ಯರಾದ ಶ್ರೀಪತಿ ಮೆಣಸುಮನೆ, ಶಶಿಧರ ಕೋಟೆಮನೆ, ರಾಘವೇಂದ್ರ ಮೆಣಸುಮನೆ, ಯಶವಂತ ಪಟಗಾರ, ಡಿ.ಆರ್.ಎಫ್.ಒ ಶಿವಾನಂದ, ಕಾವಲುಗಾರ ಸಂಗಮೇಶ ಹಾಗೂ ಪೊಲೀಸರು, ಅಗ್ನಿಶಾಮಕದಳದ ಸಿಬ್ಬಂದಿಯೊಂದಿಗೆ ರಾತ್ರಿ 11 ಗಂಟೆಯವರೆಗೆ ಶೋಧ ಕಾರ್ಯ ನಡೆಸಿದರೂ ಪತ್ತೆಯಾಗಿರಲಿಲ್ಲ.
ಇಂದು ಬೆಳಿಗ್ಗೆ ಶೋಧ ಕಾರ್ಯ ತೀವ್ರಗೊಳಿಸಿದಾಗ, 10.30 ಗಂಟೆಯ ಸುಮಾರಿಗೆ ನೀರಿನಲ್ಲಿ ಮೃತದೇಹ ದೊರೆತಿದೆ. ವಿಷಯ ತಿಳಿದ ಸಂಬಂಧಿಕರು, ಸ್ನೇಹಿತರು ನೂರಾರು ಸಂಖ್ಯೆಯಲ್ಲಿ ಸ್ಥಳದಲ್ಲಿದ್ದರು. ಯಲ್ಲಾಪುರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.