ಸಾಕು ಮಾಡಿ, ಗಡಿ ಭಾಷೆ ಗದ್ದಲ

hegde-sir-1-696x348
Advertisement

ಕನ್ನಡ ನಾಡಿನ ಒಂದಿಂಚೂ ಭೂಮಿಯನ್ನು ಬಿಟ್ಟುಕೊಡಲಾರೆವು… ಅಲ್ಲಿರುವುದು ನಮ್ಮ ನೆಲ… ಅದನ್ನು ಪಡೆಯದೇ ಬಿಡಲಾರೆವು… ಕರ್ನಾಟಕ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಗಳು, ಭಾಷಾ ಹೋರಾಟಗಾರರು, ಗಡಿ ನೇತಾರರ ಈ ವೀರಾವೇಶದ ಮಾತು ಕೇಳಿದ ಬಾಲಕನೊಬ್ಬ, ಏನು ಯುದ್ಧವಾಗುತ್ತಾ? ಬಲಾಬಲ ಪ್ರದರ್ಶನವಾಗುತ್ತಾ? ನಾವೇ ಗೆಲ್ತೆವೋ, ಅವರು ಗೆಲ್ತಾರೋ' ಎಂಬ ಕುತೂಹಲದ ಪ್ರಶ್ನೆಯನ್ನು ಮುಂದಿಟ್ಟ. ಇದು ಮುಗ್ಧ ಮಕ್ಕಳ ನಡುವಿನ ಚರ್ಚೆಯಾಗುವಂತಹ ವಿದ್ಯಮಾನವೀಗ. ಉಕ್ರೇನ್- ರಷ್ಯಾ ಯುದ್ಧವನ್ನು, ಜಾಗತಿಕ ಮೂರನೇ ಮಹಾಯುದ್ಧವನ್ನು, ಕಾರ್ಗಿಲ್ ಯುದ್ಧವನ್ನು ಎಲ್ಲವನ್ನೂ ಕೂಡ ಈ ವಿವಾದಕ್ಕೆ ಮಕ್ಕಳು ಎಳೆತರುತ್ತಿದ್ದಾರೆ. ಕರ್ನಾಟಕ ಮಹಾರಾಷ್ಟ್ರದ ಗಡಿ ವಿವಾದ ಮುಗ್ಧ ಮಕ್ಕಳಲ್ಲಿ, ಅಮಾಯಕರಲ್ಲಿ ಇನ್ನೂ ಅದೇ ಕಲ್ಪನೆಯನ್ನು ಮೂಡಿಸುತ್ತಿದೆ. ಕಾರಣ, ರಾಜ್ಯದ ಮಕ್ಕಳಿಗೆ, ಭಾಷಾವಾರು ಪ್ರಾಂತ್ಯ ರಚನೆ, ಈ ಒಕ್ಕೂಟ ಪ್ರಜಾಪ್ರಭುತ್ವ ವ್ಯವಸ್ಥೆ ಇವ್ಯಾವುಗಳ ಪರಿಕಲ್ಪನೆ- ಇತಿಹಾಸವನ್ನೇ ಸರಿಯಾಗಿ ತಿಳಿಸುವ ಕೆಲಸ ಆಗಿಲ್ಲ. ದೃಶ್ಯ ಮಾಧ್ಯಮಗಳಲ್ಲಿ ನಾರಾಯಣಗೌಡ, ಉದ್ಧವ ಠಾಕ್ರೆ, ಬೊಮ್ಮಾಯಿ, ಕನ್ನಡ- ಮರಾಠಿ ``ಉಟ್ಟು ಓರಾಟ''ಗಾರರ ವೀರಾವೇಶದ, ಆಕ್ರೋಶದ, ಸೇಡಿನ ಮಾತು ಕೇಳಿ ಇನ್ನೇನು ಎರಡು ರಾಜ್ಯಗಳ ನಡುವೆ ಯುದ್ಧವೇ ಆಗಿಬಿಡುತ್ತದೇನೋ ಎನ್ನುವಂತೆ ಕಲ್ಪಿಸಿಕೊಂಡುಬಿಡುತ್ತಿದ್ದಾರೆ. ಗಡಿ ತಂಟೆ, ಅದು ಕರ್ನಾಟಕ- ಮಹಾರಾಷ್ಟ್ರದ ನಡುವಿನ ವಿವಾದ, ಇಂದು ನಿನ್ನೆಯದಲ್ಲ. ಹಾಗಂತ, ಗಡಿ ಭಾಗದ ಎರಡೂ ರಾಜ್ಯದ ಸಾಮಾನ್ಯ ಜನರಿಗೆ ಇದು ಬೇಕೂ ಆಗಿಲ್ಲ. ಆಸಕ್ತಿಯೂ ಇಲ್ಲ. ಚುನಾವಣೆ ಸಮೀಪ ಬಂದಾಗ ಇದು ಧುತ್ತೆಂದು ಏಳುತ್ತದೆ. ಎರಡೂ ರಾಜ್ಯಗಳ ಭಾಷಾ ಪ್ರಮುಖರನ್ನು ಅಥವಾ ಹೋರಾಟಗಾರರನ್ನು ನಾಡದ್ರೋಹಿಗಳೆಂದು ಟೀಕಿಸತೊಡಗುತ್ತಾರೆ. ಪರಸ್ಪರ ಎಲ್ಲ ಅವಾಚ್ಯ, ಆಕ್ರೋಶದ ಭಾಷೆಗಳೊಂದಿಗೆ ಹೀಗಳಿಯುತ್ತಾರೆ. ಜನರನ್ನು ಕೆರಳಿಸುತ್ತಾರೆ. ಸಾವಿರಾರು ಕೋಟಿ ರೂಪಾಯಿಗಳಷ್ಟು ಈ ಗಡಿ ತಂಟೆಗೆ ಹೋರಾಟಗಳನ್ನು ಹತ್ತಿಕ್ಕಲು ಅಥವಾ ನಡೆಸಲು, ಜನರನ್ನು ಪ್ರಚೋದಿಸಲು, ಕುಮ್ಮಕ್ಕು ನೀಡಲು ಎರಡೂ ರಾಜ್ಯಗಳು ವ್ಯಯ ಮಾಡಿದ್ದೂ ಇದೆ. ಹದಿನೆಂಟು ವರ್ಷಗಳ ಹಿಂದೆ ಮಹಾರಾಷ್ಟ್ರ ಸರ್ಕಾರ ಕರ್ನಾಟಕದ ಮರಾಠಿ ಭಾಷಿಕ ಪ್ರದೇಶಗಳನ್ನು ತನಗೆ ಹಸ್ತಾಂತರಿಸಬೇಕು ಎಂದು, ಇದು ನ್ಯಾಯಪೀಠದಲ್ಲಿಯೇ ಇತ್ಯರ್ಥವಾಗಬೇಕು ಎಂದು ಸುಪ್ರೀಂ ಕೋರ್ಟಿನ ಮೆಟ್ಟಿಲೇರಿತ್ತು. ಅಲ್ಲಿಯವರೆಗೆ ನಡೆದ ಹೋರಾಟಗಳು, ಕುತಂತ್ರಗಳು, ಪ್ರಚೋದನೆಗಳು ಇವೆಲ್ಲವೂ ವಿಫಲವಾದಾಗ ಈ ಹೊಸ ತಂತ್ರಕ್ಕೆ ಮಹಾರಾಷ್ಟ್ರ ಹೊರಟಿತ್ತು. ಈಗ ಈ ಮೊಕದ್ದಮೆ ಸುಪ್ರೀಂ ಕೋರ್ಟಿನ ವಿಚಾರಣೆಯ ಹಂತಕ್ಕೆ ಬಂದಾಗ ಎರಡೂ ರಾಜ್ಯಗಳ ಗಡಿಯಲ್ಲಿ ಉದ್ವಿಗ್ನತೆ ಹುಟ್ಟಿಸುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿರುವುದನ್ನು ಜನರೂ ಅರ್ಥ ಮಾಡಿಕೊಂಡಿದ್ದಾರೆ. ಈಗ ಸರ್ವೋಚ್ಚ ನ್ಯಾಯಾಲಯದಲ್ಲಿ ಇರುವುದು ಈ ವಿವಾದವನ್ನು ಎಪ್ಪತ್ತೈದು ವರ್ಷಗಳ ನಂತರ ಮಹಾರಾಷ್ಟ್ರ ಅರ್ಜಿಯನ್ನು ಕೈಗೆತ್ತಿಕೊಳ್ಳುವುದೋ ಅಥವಾ ತಿರಸ್ಕರಿಸುವುದೋ ಎಂಬ ಪ್ರಶ್ನೆ. ವಿಚಾರಣೆಯಲ್ಲಿ ಏನಾದರೂ ಅರ್ಥವಿದೆಯೇ ಎಂಬ ಪ್ರಶ್ನೆಯೂ ತ್ರಿಸದಸ್ಯ ಪೀಠದ ಮುಂದಿದೆ. ಅರ್ಜಿ ವಿಚಾರಣೆಗೆ, ಮೆಂಟೆನೆಬಿಲಿಟಿಯ ಪ್ರಶ್ನೆಯೇ ಇತ್ಯರ್ಥವಾಗದೇ ಇದ್ದಾಗ, ಈಗಲೇ ಆ ಪ್ರದೇಶಗಳು ತಮ್ಮದು ತಮ್ಮದು ಎನ್ನುವ ಧಾಂಗುಡಿ ಇಡುವ ಪ್ರಯತ್ನ ಕಳೆದೊಂದು ವಾರದಿಂದ ನಡೆದಿದೆ. ಕಾರಣ ಇಷ್ಟೇ. ಈಗ ಮತ್ತೆ ಚುನಾವಣೆ ಬರುತ್ತಿದೆ ! ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ರಾಜ್ಯಗಳ ನಡುವಿನ ಸಮರ, ಹುನ್ನಾರಗಳಿಗೆ ಅವಕಾಶ ಇಲ್ಲ. ವಿಸ್ತರಣಾ ವಾದಕ್ಕೂ ಬೆಲೆಯಿಲ್ಲ. ಇಡೀ ದೇಶದ ಜನ ಈಗ ಭಾಷೆ, ಗಡಿ, ಜಾತಿ, ಮತ ಇಲ್ಲದೇ ಒಂದಾಗಿ ಬದುಕು ಸಾಗಿಸುತ್ತಿರುವಾಗ ಗಡಿ ತಂಟೆಯ ತುಂಟಾಟಕ್ಕೆ ಜನಮನ್ನಣೆಯೂ ಇಲ್ಲ. ಆದರೆ ಆತಂಕ ಸೃಷ್ಟಿಸಲೇನಡ್ಡಿ? ಜನರ ಭಾವನೆ ಕೆರಳಿಸುವುದಕ್ಕೆ ಅಡೆತಡೆ ಇಲ್ಲವಲ್ಲ... ಹಾಗೆ..! ಭಾಷಾ- ಗಡಿ ವಿವಾದಗಳು ಏನೇ ಇರಲಿ. ಆದರೆ ಗಡಿ ಭಾಗದ ಸುಮಾರು ಐವತ್ತಕ್ಕೂ ಹೆಚ್ಚು ತಾಲ್ಲೂಕುಗಳ, ಎಂಟು ನೂರಕ್ಕೂ ಅಧಿಕ ಗ್ರಾಮಗಳ ಜನರ ಗೋಳು ಮಾತ್ರ ಯಾರಿಗೂ ಬೇಡ. ಅವರಿಗೆ ಈ ವಿವಾದ ಬೇಕಿಲ್ಲ. ಎಲ್ಲರಂತೆ ಬದುಕಲು ತಮ್ಮ ಕುಟುಂಬ, ನೆಲ- ಜಲ ಸಂರಕ್ಷಣೆ ಜೊತೆ ನಿರಾಳವಾಗಿ ಇರಲು ವಾತಾವರಣ, ಪೂರಕ ಸೌಲಭ್ಯಗಳು ಬೇಕು ಅಷ್ಟೇ. ಇದು ಕರ್ನಾಟಕದ ಜನರಷ್ಟೇ ಅಲ್ಲ. ನೆರೆಯ ರಾಜ್ಯದ ಗಡಿಯಲ್ಲಿರುವವರ ಮನದಿಂಗಿತವೂ ಕೂಡ. ಗಡಿ ಭಾಗದ ಬಹುತೇಕ ಜನರಿಗೆ, ಪ್ರದೇಶಗಳಿಗೆ ತಾವು ಯಾವ ರಾಜ್ಯದವರು, ಯಾವ ಸೌಲಭ್ಯ ಪಡೆಯಬೇಕು? ನಮಗಾರು ದಾತರು ಎನ್ನುವ ಆತಂಕದಲ್ಲೇ ಜೀವನ ಸಾಗುತ್ತಿದೆ. ಅವರ ಭೂದಾಖಲೆಗಳು ಸಕ್ರಮವಾಗಿಲ್ಲ. ಸರ್ಕಾರಿ ಕಚೇರಿಗಳು, ಶಾಲಾ- ಕಾಲೇಜುಗಳು, ಆಸ್ಪತ್ರೆ, ನೀರು, ಮೂಲಭೂತ ಸೌಲಭ್ಯ, ರಸ್ತೆ ಯಾವುವೂ ಇನ್ನೂ ಜನರಿಗೆ ಲಭ್ಯವಿಲ್ಲ. ಶಾಲೆ ತೆರೆದರೂ ಶಿಕ್ಷಕರಿಲ್ಲ. ಶಿಕ್ಷಕರ ನೇಮಕವಾದರೆ ಆತ ಶಾಲೆಗೆ ಬರುವುದಿಲ್ಲ. ಆಸ್ಪತ್ರೆ ತೆರೆದರೆ ವೈದ್ಯರಿಲ್ಲ. ವೈದ್ಯರು ದಾಖಲೆಯಲ್ಲಿ ಮಾತ್ರ ನೇಮಕ. ಸಂಬಂಧಿಸಿದ ಪಂಚಾಯತಿಗಳದ್ದೂ ಇದೇ ಕಥೆ. ಒಂದು ಮಳೆ ಬಂದರೆ ಜನರ ಸಾವು ನೋವಿಗೆ ಸ್ಪಂದಿಸುವವರಿಲ್ಲ. ಕಷ್ಟ ನಷ್ಟಗಳನ್ನು ಆಲಿಸುವವರಿಲ್ಲ. ಗಡಿ ಭಾಗವನ್ನು ಎಲ್ಲ ರಾಜ್ಯಗಳು, ಸ್ಥಳೀಯಾಡಳಿತಗಳು ನಿರ್ಲಕ್ಷ್ಯ ಮಾಡಿರುವುದು ಅಷ್ಟೇ ಸತ್ಯ. ರಾಜಧಾನಿಗಳಿಂದ ದೂರ ಇರುವ ಎರಡೂ ಭಾಷಿಕರಿರುವ ಈ ಪ್ರದೇಶಗಳ ಜನರ ಕೂಗು ಆಯಾ ರಾಜ್ಯಗಳ ರಾಜಧಾನಿಗಳಿಗೆ ತಲುಪುವುದೂ ಇಲ್ಲ. ಇಷ್ಟಕ್ಕೂ ಕೇಳಿಸಿಕೊಳ್ಳುವ ಮನಸ್ಸು ವ್ಯವಧಾನವೂ ಸರ್ಕಾರ ನಡೆಸುವ ಮುಖ್ಯಸ್ಥರಿಗೂ ಇಲ್ಲ. ಕರ್ನಾಟಕದ ಗಡಿ ಪ್ರದೇಶಗಳ ಅಭಿವೃದ್ಧಿಗಾಗಿ ೨೦೧೦ರಲ್ಲಿ ಗಡಿ ಪ್ರದೇಶಾಭಿವೃದ್ಧಿ ಮಂಡಳಿ ರಚಿಸಲಾಯಿತು. ಇದಕ್ಕೂ ಪೂರ್ವ ಗಡಿ ಭಾಗದ ತಾಲ್ಲೂಕುಗಳ ಅಭಿವೃದ್ಧಿ, ಮೂಲಭೂತ ಸೌಲಭ್ಯ, ಸೌಕರ್ಯ, ರಸ್ತೆ, ಶಾಲೆ ಇತ್ಯಾದಿಗಳಿಗಾಗಿ ವೀರೇಂದ್ರ ಪಾಟೀಲ ಮುಖ್ಯಮಂತ್ರಿಯಾಗಿದ್ದಾಗ, ತಾಲ್ಲೂಕಿಗೆ ಪ್ರತಿ ವರ್ಷ ೨೫ ಲಕ್ಷ ರೂಪಾಯಿಯನ್ನು ಹೆಚ್ಚುವರಿ ಅನುದಾನವನ್ನಾಗಿ ನೀಡಿದ್ದರು. ಆ ನಂತರ ಆ ಮೊತ್ತ ೧೫, ೧೦ ಹೀಗೆ ಇಳಿಕೆಯಾಗಿ, ಕೊನೆಗೆ ವರ್ಷಕ್ಕೆ ಎರಡು ಮೂರು ಲಕ್ಷ ರೂಪಾಯಿಗಳನ್ನಷ್ಟೇ ಸರ್ಕಾರ ಬಿಡುಗಡೆ ಮಾಡತೊಡಗಿತು. ಇಪ್ಪತ್ತೈದು ಲಕ್ಷದಲ್ಲಿ ಈಗೇನಾಗುತ್ತದೆ ಎನ್ನುವ ಪ್ರಶ್ನೆ ಸಹಜ. ಆದರೆ ವೀರೇಂದ್ರ ಪಾಟೀಲ ಈ ಕ್ರಮ ಅನುಸರಿಸಲು ಆರಂಭಿಸಿದಾಗ ಉತ್ತಮ ಪ್ರತಿಕ್ರಿಯೆ ಕೂಡ ಇತ್ತು. ಅಷ್ಟಿಷ್ಟು ಕೆಲಸಗಳೂ ಕೂಡ ಆರಂಭವಾದವು. ಆ ನಂತರ ಬಂದ ಸರ್ಕಾರಗಳು ಇತ್ತ ಗಮನಿಸಲೇ ಇಲ್ಲ. ೨೦೧೦ರಲ್ಲಿ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರವನ್ನು ರಚಿಸಲಾಯಿತು. ಪ್ರಥಮ ವರ್ಷವೇನೋ ೨೫ ಕೋಟಿ ರೂಪಾಯಿ ಘೋಷಣೆಯಾಗಿ ಬಿಡುಗಡೆಯಾದದ್ದು ಸರಿಸುಮಾರು ೧೦ ಕೋಟಿ ರೂಪಾಯಿ ಮಾತ್ರ. ಈವರೆಗೆ ಪ್ರಾಧಿಕಾರಕ್ಕೆ ಏಳು ಅಧ್ಯಕ್ಷರಾಗಿದ್ದಾರೆ. ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಇಟ್ಟುಕೊಂಡು ಗಡಿ ಪ್ರಾಧಿಕಾರಕ್ಕೊಂದು ಅಧ್ಯಕ್ಷರು ಮತ್ತು ಸಲಹಾ ಮಂಡಳಿ ಸದಸ್ಯರನ್ನು ನೇಮಿಸಲಾಗಿದೆ. ಇಷ್ಟಕ್ಕೂ ವರ್ಷಕ್ಕೆ ಬಿಡುಗಡೆಯಾದ ಹಣ, ೨, ೩, ೫, ೧೦ ಕೋಟಿ ರೂಪಾಯಿ. ಈ ಪ್ರಾಧಿಕಾರದ ಕಾರ್ಯವೈಖರಿಗಳು ತುಂಬ ವಿಶೇಷ. ಪ್ರಾಧಿಕಾರ ಸೂಚಿಸಿದ ಕಾಮಗಾರಿಗಳನ್ನು ಶಾಸಕರುಗಳ ಶಿಫಾರಸಿನ ಮೇರೆಗೆ ಆಯಾ ಸ್ಥಳೀಯಾಡಳಿತಗಳ ನೆರವು ಹಾಗೂ ಸಹಕಾರದೊಂದಿಗೆ ಅವು ಅನುಷ್ಟಾನಗೊಳ್ಳಬೇಕು. ಜಿಲ್ಲಾ ಪಂಚಾಯ್ತಿಯ ಹಣ, ಗ್ರಾಮ ಪಂಚಾಯ್ತಿಯ ನೆರವು, ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಕ್ರಿಯಾ ಯೋಜನೆ ಮುಖಾಂತರವಷ್ಟೇ ಅವು ಅನುಷ್ಟಾನಗೊಳ್ಳಬೇಕು. ಅಂದರೆ ಪ್ರಾಧಿಕಾರ ಶಿಫಾರಸು ಮಾಡಬಹುದೇ ಹೊರತು, ನೇರವಾಗಿ ಮಂಜೂರು ಮಾಡುವಂತೆಯೂ ಇಲ್ಲ, ಅನುಷ್ಟಾನಗೊಳಿಸುವಂತೆಯೂ ಇಲ್ಲ. ಹಾಗಿದ್ದೂ ಈ ಪ್ರಾಧಿಕಾರಕ್ಕೆ ಇದುವರೆಗೆ ಸರಿಸುಮಾರು ೧೧೦ ಕೋಟಿ ರೂಪಾಯಿಗೂ ಹೆಚ್ಚು ಅನುದಾನ ಬಿಡುಗಡೆಯಾಗಿದೆ. ಆದರೆ ಖರ್ಚಾದದ್ದು ಅಧ್ಯಕ್ಷರ ಪ್ರವಾಸ, ಸಭೆ, ಅವರ ಭತ್ಯೆ, ಇಂಧನ, ಅಧಿಕಾರಿ- ಸಿಬ್ಬಂದಿ ವರ್ಗದ ಸಂಬಳ, ಕಚೇರಿ ನಿರ್ವಹಣೆ ಇತ್ಯಾದಿಗಳಿಗಷ್ಟೇ. ಹಾಗಾಗಿಯೇ ಐದು ಅಧ್ಯಕ್ಷರ ಮೇಲೆ ಹಣದುರ್ಬಳಕೆ ಆರೋಪವನ್ನು ಮಹಾಲೆಕ್ಕಪರಿಶೋಧಕರ ವರದಿ ಮಾಡಿದೆ. ಈಗ ಮಹಾರಾಷ್ಟ್ರದ ಗಡಿ ಭಾಗದ ಕೆಲವು ಕನ್ನಡ ಭಾಷಿಕ ಪ್ರದೇಶಗಳು ನಮಗೆ ಮಹಾರಾಷ್ಟ್ರ ಬೇಡ, ಕರ್ನಾಟಕಕ್ಕೆ ನಾವು ಹೋಗುತ್ತೇವೆ ಎಂದು ಮಹಾರಾಷ್ಟ್ರ ಸರ್ಕಾರದ ಮಲತಾಯಿ ಮತ್ತು ನಿರ್ಲಕ್ಷ್ಯ ಧೋರಣೆಗೆ ಬೇಸತ್ತು ಠರಾವು ಸ್ವೀಕರಿಸಿದ್ದಾರೆ. ಪುಣ್ಯ, ಕರ್ನಾಟಕದ ಗ್ರಾಮಗಳು ಆ ರೀತಿಯ ನಿರ್ಧಾರಕ್ಕಿನ್ನೂ ಇಳಿದಿಲ್ಲ. ಕರ್ನಾಟಕ ಸರ್ಕಾರ ಮೊದಲು ಮಾಡಬೇಕಾದದ್ದು ಎಲ್ಲ ಇಲಾಖೆಗಳ ಸಚಿವರುಗಳು ಸುಸಜ್ಜಿತ ಗ್ರಾಮಗಳಲ್ಲಿಗ್ರಾಮ ವಾಸ್ತವ್ಯ’ ಮಾಡುವುದನ್ನು ನಿಲ್ಲಿಸಿ ಗಡಿ ಭಾಗಕ್ಕೆ ತೆರಳಬೇಕು, ಅಲ್ಲಿಯ ಜನರ ಗೋಳು ಕಾಣಬೇಕು ಎಂಬ ಆದೇಶವನ್ನು. ಐಎಎಸ್ ಅಧಿಕಾರಿಗಳು, ಕಾರ್ಯದರ್ಶಿಗಳ ಮಟ್ಟದವರು, ಪ್ರಬುದ್ಧರು ಗಡಿ ಪ್ರದೇಶ ಅಡ್ಡಾಡಿದರೆ ಸ್ವಲ್ಪ ಮೈಕೈ ಸೊಕ್ಕು ಕರಗುತ್ತದೇನೋ? ಅಲ್ಲಿಯ ಗೋಳಾಟ- ಸಂಕಷ್ಟದ ಕನಿಷ್ಟ ಅರಿವಾದರೂ ಆದೀತೇನೋ? ಗಡಿ ಭಾಗದ ಶಾಸಕರ ಹೊರತಾಗಿ ಯಾವ ಮಂತ್ರಿ ಮಹೋದಯ ಅತ್ತ ಕಾಲಿಟ್ಟಿಲ್ಲ.
ಅವರ ಭೂ ದಾಖಲೆಗಳು, ಸಾಲ ಸೌಲಭ್ಯಗಳು, ಸಂಕಷ್ಟಗಳು ಇವನ್ನು ಕನಿಷ್ಟ ಕೇಳುವ ಸೌಜನ್ಯವನ್ನು ಕೂಡ ಸರ್ಕಾರ ಮಾಡಿಲ್ಲ.
ಬೆಂಗಳೂರು ಸಮೀಪವೇ ಇರುವ ತಮಿಳುನಾಡು- ಆಂಧ್ರಪ್ರದೇಶಗಳ ಗಡಿಗಳಲ್ಲಿ ಅಲ್ಲಿನ ಸರ್ಕಾರಗಳು ಬೃಹತ್ ಉದ್ದಿಮೆಗಳನ್ನೇ ಆರಂಭಿಸಿ ಸಾವಿರಾರು ಮಂದಿಗೆ ಉದ್ಯೋಗ ನೀಡುತ್ತಿವೆ. ಇತ್ತ ಗಡಿ ಭಾಗದ ಜಿಲ್ಲೆಗಳ ತುಮಕೂರು, ಬೆಳಗಾವಿ, ಕಾರವಾರ, ಚಾಮರಾಜನಗರ ಭಾಗದಲ್ಲಿ ಅಭಿವೃದ್ಧಿಯ ಲವಲೇಶ ಕಾಣುತ್ತಿಲ್ಲ. ಅದೇ ಕರ್ನಾಟಕದ ಜನ ಆ ರಾಜ್ಯಗಳಿಗೆ ಉದ್ಯೋಗ ಅರಸಿ ಹೋಗುತ್ತಿರುವುದಕ್ಕೆ ಕಾರಣ. ಕರ್ನಾಟಕ ಸರ್ಕಾರ ಆ ಭಾಗದ ಜನರ ಮನಸ್ಸನ್ನೂ ಅರ್ಥ ಮಾಡಿಕೊಳ್ಳಲಿಲ್ಲ. ಪ್ರೀತಿಯನ್ನೂ ಗಳಿಸಲಿಲ್ಲ.
ಎಲ್ಲ ಅಭಿವೃದ್ಧಿ ಯೋಜನೆಗಳು ಅಲ್ಲಿ ಗಗನ ಕುಸುಮ. ಕನ್ನಡಿಯೊಳಗಿನ ಗಂಟಾದವು. ಆದಾಗ್ಯೂ ಕನ್ನಡ ಭಾಷಿಕರ, ಕರ್ನಾಟಕದಲ್ಲಿ ನೆಲೆಸಿರುವ ಜನರ ಭಾಷಾಭಿಮಾನ, ಗೌರವ ಮತ್ತು ಪ್ರೇಮವನ್ನು ಮೆಚ್ಚಲೇಬೇಕು. ಏಕೆಂದರೆ ತಮ್ಮ ನೆಪದಲ್ಲಿ ನಡೆಯುತ್ತಿರುವ ಈ ಗಡಿ ರಾಜಕಾರಣ- ವಿವಾದಗಳನ್ನು ಅರ್ಥೈಸಿಕೊಂಡಿದ್ದಾರೆ. ನಯವಾಗಿ ತಿರಸ್ಕರಿಸಿದ್ದಾರೆ. ಹಾಗಾಗಿಯೇ ಈಗ ಭಾಷಾ ಗಡಿ ವಿವಾದಕ್ಕೆ ಬೆಲೆ ಸಿಕ್ಕುತ್ತಿಲ್ಲ. ಈಗ ಎದ್ದಿರುವ ಗಡಿ ತಂಟೆ, ವಿವಾದ, ಘರ್ಷಣೆಗಳು ಮತ್ತೆ ಆತಂಕ ಸೃಷ್ಟಿಸಬಹುದೇನೋ ಅಷ್ಟೇ. ಫಲಶ್ರುತಿ ಮಾತ್ರ ಏನೂ ಇಲ್ಲ. ಉಚಗಾಂವಿಯ ತುಳಜಮ್ಮನ ಆತಂಕ ಸೊಲ್ಲಾಪುರದಲ್ಲಿರುವ ಮಗಳ ಕುಟುಂಬದ ಕಥೆ ಏನು? ಎಂಬುದು. ಲೋಂಡಾದ ಖಾನೋಬಾಗೆ ಮುಂಬೈನಲ್ಲಿರುವ ತನ್ನ ಮಗನ ಉದ್ಯೋಗಕ್ಕೆ ಪೆಟ್ಟು ಬಂದೀತೇ, ಧಕ್ಕೆ ಉಂಟಾದೀತೇ ಎನ್ನುವ ಚಿಂತೆ.
ಜನರಿಗೆ ವಿಶೇಷವಾಗಿ ಗಡಿ ಭಾಗದ ಜನರಿಗೆ, ಈ ವಿವಾದ, ರಾಜಕಾರಣ, ಘರ್ಷಣೆ ಬೇಕಿಲ್ಲ. ಆದರೆ ಅವರ ಹೆಸರಲ್ಲಿ ಇದನ್ನು ಜೀವಂತವಾಗಿಟ್ಟುಕೊಳ್ಳುವ ಹುನ್ನಾರದ ಅರಿವು ಅವರಿಗೂ ಇದೆ. ಗಡಿ ವಿಷಯ ಕೆದಕಿ ಗದ್ದಲ ಎಬ್ಬಿಸಿದರೆ ಒಳನಾಡಿನ ಮತ ಬಂದೀತು ಎನ್ನುವ ಕುತಂತ್ರ ಮಾತ್ರ ಮತ ರಾಜಕಾರಣವನ್ನು ಅವಲಂಬಿಸಿರುವ ರಾಜಕಾರಣಿಗಳದ್ದು ಅಷ್ಟೇ. ಭಾರತೀಯರಾದ ನಾವೆಲ್ಲ, ಅಂದರೆ ಎಲ್ಲ ರಾಜ್ಯಗಳೂ, ಪರಸ್ಪರ ಗಡಿಗಳನ್ನು ಹಂಚಿಕೊಂಡೇ ಅಲ್ಲವೇ ಬಾಳಬೇಕಾದದ್ದು? ಗಡಿ ಜಿಲ್ಲೆ- ಭಾಗಗಳು ಇಲ್ಲದೇ, ಒಂದು ಭಾಷಿಕರು ಇನ್ನೊಂದು ಅಧಿಕೃತ ಭಾಷೆಯ ರಾಜ್ಯವನ್ನು ಅವಲಂಬಿಸದೇ ಬದುಕಲು ಸಾಧ್ಯವೇ? ಒಕ್ಕೂಟ ವ್ಯವಸ್ಥೆಯ ಈ ಸತ್ಯವನ್ನು ಕೆಲವೇ ಕೆಲ ರಾಜಕೀಯ ಹುನ್ನಾರದ ತಂಟೆಕೋರರಿಗೆ ಶಾಶ್ವತವಾಗಿ ಮನವರಿಕೆ ಮಾಡಿಕೊಡಬೇಕಾದ ಸಮಯವಿದು. ಹೀಗಾಗಿ ಗಡಿ ವಿಷಯ ರಾಜಕೀಯ ಅಸ್ತ್ರವಾಗದಂತೆ ಸುಪ್ರೀಂ ಕೋರ್ಟ್ ಆದಷ್ಟು ಬೇಗ ಅಂತಿಮ ತೀರ್ಪು ನೀಡಲಿ ಎಂಬುದು ಜನರ ಆಶಯ.