ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ನಾವಲಗಿ ಗ್ರಾಮದ ಮಲ್ಲಪ್ಪ ಗಣಿಯವರು ಬಹುಮುಖ ಪ್ರತಿಭೆಯ ಹಿರಿಯ ಕಲಾವಿದರು. ಸಂಗ್ಯಾ ಬಾಳ್ಯಾ ಬೈಲಾಟದ ಮೂಲಕ ನಾವಲಗಿ ಗ್ರಾಮದ ಹೆಸರನ್ನು ಪ್ರಸಿದ್ಧ ಪಡಿಸಿದವರು. ಬೈಲಹೊಂಗಲ ತಾಲ್ಲೂಕಿನಲ್ಲಿ ನಡೆದ ನೈಜ ಘಟನೆಯನ್ನು ಸಂಗ್ಯಾ ಬಾಳ್ಯಾ ಇದನ್ನು ರಂಗಭೂಮಿಗೆ ತೆಗೆದುಕೊಂಡು ಬಂದು ಅದಕ್ಕೆ ಶ್ರೇಷ್ಠ ಮನ್ನಣೆಯನ್ನು ತಂದುಕೊಟ್ಟ ಶ್ರೇಯಸ್ಸು ಮಲ್ಲಪ್ಪ ಗಣಿಯವರದು.
ಸಂಗ್ಯಾ ಬಾಳ್ಯಾ ಬೈಲಾಟದ ಪ್ರತಿಯೊಂದು ಪಾತ್ರವನ್ನು ಸಮರ್ಥವಾಗಿ ನಿರ್ವಹಿಸುವುದರ ಜೊತೆಗೆ ಅದರಲ್ಲಿಯ ಬಹುಮುಖ್ಯ ಗಂಗಾಳ ಪಾತ್ರಕ್ಕೆ ಜೀವ ತುಂಬಿದವರು ಮಲ್ಲಪ್ಪ ಗಣಿಯವರು. ಈಗಲೂ ಅವರನ್ನು ಬಹಳಷ್ಟು ಜನರು ಅವರನ್ನು ಸಂಗ್ಯಾ ಬಾಳ್ಯಾದ ಗಂಗಾ ಎಂದೇ ಕರೆಯುತ್ತಾರೆ.ಮಲ್ಲಪ್ಪ ಗಣಿಯವರು ಬಹುಮುಖ ಪ್ರತಿಭೆಯ ಬಹುದೊಡ್ಡ ಕಲಾವಿದರು. ಕೇವಲ ಬೈಲಾಟಕ್ಕೆ ತಮ್ಮನ್ನು ತಾವು ಸಿಮೀತಗೊಳಿಸದೆ ಗಣಿಯವರು ಹಾಡುಗಾರಿಕೆ, ಭಜನೆ, ಭಕ್ತಿ, ರಂಗಭೂಮಿ ಗೀತೆಗಳನ್ನು ಹಾಡುವುದರ ಜೊತೆಗೆ ತಾಳ, ಹಾರ್ಮೊನಿಯಃ, ದಮಡಿ ಹಾಗೂ ಕಾಲ್ಪೆಟ್ಟಿಗೆಯನ್ನು ನುಡಿಸುವ ಮಹತ್ವದ ಕಲಾವಿದರು. ಮಲ್ಲಪ್ಪ ಗಣಿಯವರು ಸಾಂಸ್ಕೃತಿಕ ಲೋಕದ ಬಹುದೊಡ್ಡ ಅಸ್ತಿಯಾಗಿದ್ದಾರೆ.
ಬೆಳಗಾವಿಯ ವಿಶ್ವ ಕನ್ನಡ ಸಮ್ಮೇಳನ, ಬೀದರಿನಲ್ಲಿ ನಡೆದ ಅಖಿಲ ಭಾರತ ಜಾನಪದ ಸಮ್ಮೇಳನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಅಯ್ಯನಗುಡಿ ಉತ್ಸವ, ಲಕ್ಕುಂಡಿ ಉತ್ಸವ, ಮಡಕೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ನಾಡಿನ ಬಹುತೇಕ ಸರ್ಕಾರಿ ಉತ್ಸವ ಹಾಗೂ ಮೈಸೂರ ದಸರೆ, ಜೊತೆಗೆ ಆಕಾಶವಾಣಿ ಧಾರವಾಡ ಕೇಂದ್ರ ಮತ್ತು ಚಂದನ ದೂರದರ್ಶನದಲ್ಲಿ ಹಾಗೂ ಕರ್ನಾಟಕ ರಾಜ್ಯದ ಪ್ರಮುಖ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಕರ್ನಾಟಕ ಮಹಾರಾಷ್ಟ್ರದ ಗಡಿ ಜಿಲ್ಲೆಯಲ್ಲಿಯೂ ಕೂಡಾ ಅವರು ತಮ್ಮ ಕಲೆಯನ್ನು ಪ್ರದರ್ಶನ ಮಾಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಹಾಗೂ ರಾಜ್ಯದ ವಿವಿಧ ಸಂಘ ಸಂಸ್ಥೆಯವರು ಹಮ್ಮಿಕೊಂಡ ಹಾಡುಗಾರಿಕೆ ಸ್ಪರ್ಧೆಯಲ್ಲೂ ಕೂಡಾ ಅವರು ಪ್ರಥಮ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಅದೇ ರೀತಿಯಾಗಿ ವಿವಿಧ ಸಂಘ ಸಂಸ್ಥೆಗಳನ್ನು ಅವರ ಕಲಾ ಸೇವೆಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಾರೆ.