ಸರ್ಕಾರ ತನಿಖೆ ನಡೆಸಿದರೆ ಕಮಿಷನ್ ಪಡೆದವರ ಬಣ್ಣ ಬಯಲು: ಡಾ.ಜಿ.ಪರಮೇಶ್ವರ

ಜಿ.ಪರಮೇಶ್ವರ
Advertisement

ಹುಬ್ಬಳ್ಳಿ: ಗುತ್ತಿಗೆದಾರರ ಸಂಘದ ಕೆಂಪಣ್ಣ ಅವರು ಕಾಂಗ್ರೆಸ್‌ನಿಂದ ಕಮಿಷನ್ ಪಡೆದಿದ್ದಾರೆ ಎಂದು ಬಿಜೆಪಿ ಸರ್ಕಾರದ ಕೆಲ ಸಚಿವರು ಆರೋಪಿಸಿದ್ದು, ಅವರದೇ ಸರ್ಕಾರವಿದೆ. ಆ ಬಗ್ಗೆ ತನಿಖೆ ನಡೆಸಲಿ. ಕಮಿಷನ್ ಪಡೆದವರ ಬಣ್ಣ ಬಯಲಾಗುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಒತ್ತಾಯ ಮಾಡಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಮಿಷನ್ ಆರೋಪದಲ್ಲಿ ಹುರುಳಿಲ್ಲ ಎಂಬುವುದಾದರೆ ತಕ್ಷಣವೇ ರಾಜ್ಯ ಸರ್ಕಾರವು ತನಿಖೆ ನಡೆಸಲಿ. ಆಗ ಬಿಜೆಪಿಯವರು ತೆಗೆದುಕೊಂಡಿದ್ದಾರೋ, ನಾವು ಪಡೆದಿದ್ದೇವೆಯೋ ಎಂಬುದು ಗೊತ್ತಾಗುತ್ತದೆ ಎಂದು ಸವಾಲು ಹಾಕಿದರು.
ಬರೀ ಗುತ್ತಿಗೆ ಕಾಮಗಾರಿಗಳಲ್ಲಷ್ಟೇ ಅಲ್ಲ. ಶಿಕ್ಷಣ ಇಲಾಖೆಯಲ್ಲಿಯೂ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಈ ಕುರಿತು ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಸಂಘ (ರುಪ್ಸಾ) ಸಹ ಪ್ರಧಾನಿಗೆ ಪತ್ರ ಬರೆದಿದೆ. ಇದರಿಂದ ಈ ಸರಕಾರವು ಇಲಾಖಾವಾರು ನಡೆಸುತ್ತಿರುವ ಭ್ರಷ್ಟಾಚಾರವು ಜಗಜ್ಜಾಹೀರಾಗುತ್ತಿದೆ. ಮುಂದೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಇಂತಹ ಭ್ರಷ್ಟಾಚಾರಗಳ ಕುರಿತು ತನಿಖೆ ನಡೆಸಲಾಗುವುದು ಎಂದರು.