ಸರ್ಕಾರಿ ಚಕ್ರವ್ಯೂಹದಲಿ ಸಂತ್ರಸ್ತ!

hegde sir
Advertisement

ಜನಾಶಯ -ಮೋಹನ ಹೆಗಡೆ‌
ಬಹುಶಃ ರಾಜ್ಯದ ಜನತೆ ಇನ್ನು ಮುಂದೆ ರಾಷ್ಟ್ರೀಯ- ರಾಜ್ಯ ಯೋಜನೆಗಳಿಗಾಗಿ ತಮ್ಮ ಜಮೀನು, ಮನೆ ಬಿಟ್ಟುಕೊಡಿ ಎಂದರೆ ಸುತಾರಾಂ ಒಪ್ಪಲಿಕ್ಕಿಲ್ಲ. ಕಳೆದ ಎಪ್ಪತ್ತು ವರ್ಷಗಳಿಂದ ಇಂತಹ ಯೋಜನೆಗಳಿಗಾಗಿ ಮನೆ, ಭೂಮಿ, ಮಠ, ಹುಟ್ಟು ನೆಲ ಕಳೆದುಕೊಂಡು ಸೂಕ್ತ ಪರಿಹಾರ ಮತ್ತು ಪುನರ್ವಸತಿ ದೊರೆಯದೇ ಒದ್ದಾಡುವ ಲಕ್ಷಾಂತರ ಮಂದಿಯ ಗೋಳು ನಿವಾರಣೆಗೆ ಪುರುಸೊತ್ತಿಲ್ಲದ ಸರ್ಕಾರದ ಧೋರಣೆಗೆ ಜನ ಈಗ ಇಂತಹ ಕಾಠಿಣ್ಯದ ನಿರ್ಧಾರಕ್ಕೆ ಬಂದರೆ ಆಶ್ಚರ್ಯವಿಲ್ಲ.
ಸಂಸತ್ತಿನಲ್ಲಿ ಇತ್ತೀಚೆಗೆ ಕರ್ನಾಟಕದ ಎರಡು ಘಟನೆಗಳು, ಎರಡು ಧ್ವನಿ ಕೇಳಿ ಬಂದವು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಈ ದೇಶದ ವಿಶೇಷವಾಗಿ ಕರ್ನಾಟಕದ ರೈತರ ಸಂಬಂಧ ತಮಗೆ ಕೇವಲ ಒಂದು ನಿಮಿಷ ಮಾತನಾಡಲು ಅವಕಾಶ ನೀಡಿದ್ದನ್ನ ಈ ಇಳಿವಯಸ್ಸಿನಲ್ಲಿಯೂ ಆಕ್ರೋಶಿತರಾಗಿ ಖಂಡಿಸಿದ್ದರು. ಹೇಮಾವತಿ, ಕಬಿನಿ ಜಲಾಶಯಗಳಿಂದ ಸಂತ್ರಸ್ತರಾದ ಜನರಿಗೆ ಇನ್ನೂ ಭೂಮಿ ಪಟ್ಟಾ ಕೊಟ್ಟಿಲ್ಲ; ಅತಂತ್ರರಾಗಿಸಿದ್ದಾರೆ ಎನ್ನುವ ಆತಂಕದ ಮಾತನ್ನು ಅವರಾಡಿದರೆ ಇನ್ನೊಬ್ಬ ಸಂಸದ ರಾಘವೇಂದ್ರ ಯಡಿಯೂರಪ್ಪ ಶರಾವತಿ ಯೋಜನೆಯಿಂದ ಮುಳುಗಡೆಯಾದ ಸಂತ್ರಸ್ತರ ಆರವತ್ತೈದು ವರ್ಷದ ಬದುಕು, ಪುನರ್ವಸತಿಯ ಬಗ್ಗೆ ಸಂಸತ್ತಿನಲ್ಲಿಯೇ ಪ್ರಸ್ತಾಪಿಸಿದರು. ಆರವತ್ತೈದು ವರ್ಷಗಳ ಹಿಂದೆ ನಾಡಿಗೆ ಬೇಳಕು ನೀಡಲು ಸರ್ವಸ್ವ ತ್ಯಾಗ ಮಾಡಿದ ಜನರಿಗೆ ಪುನರ್ವಸತಿ ಕಲ್ಪಿಸಿ ನೀಡಲಾದ ಭೂಮಿಯ ಹಕ್ಕು, ಅವರಿಗಿನ್ನೂ ದೊರೆಯದ ದಾರುಣ ಸ್ಥಿತಿ ಇದೆ. ಮೊನ್ನೆ ಮೊನ್ನೆ ನ್ಯಾಯಾಲಯ ಕೂಡ ಆ ಸಂತ್ರಸ್ತರ ತ್ಯಾಗಕ್ಕೆ ಸ್ಪಂದಿಸಲಿಲ್ಲ.
ದೇಶಕ್ಕೆ ಬೆಳಕು ನೀಡಲು, ನೀರುಣ್ಣಿಸಲು, ರಾಷ್ಟ್ರ ರಕ್ಷಣೆಗೆ ತಮ್ಮ ಭೂಮಿ ತ್ಯಾಗ ಮಾಡಿದವರಿಗೆ ಇನ್ನೂ ನೆಲೆ ನೀಡಲು ಸಾಧ್ಯವಾಗದ ಪ್ರಕರಣವದು. ಒಂದು, ಅವರಿರುವ ಸ್ಥಿತಿಗಿಂತ ಉತ್ತಮವಾಗಿ ಅವರ ಬದುಕು ಸಾಗುವಂತೆ ನೋಡಿಕೊಳ್ಳೂವುದು ಮಾನವೀಯ ಕಾರ್ಯ. ಅವರಿಗೆ ನೀಡಲಾದ ನೆಲವನ್ನು, ಅದರ ದಾಖಲೆಯನ್ನು ಆ ಜನರಿಗೆ ನೀಡಿ ಗೌರವಿಸಬೇಕಾದ ಸರ್ಕಾರ ಕಾನೂನು ಕಟ್ಟಲೆಗಳ ತೊಳಲಾಟದಲ್ಲಿ ಸಿಲುಕಿ ಮೂರು ಪೀಳಿಗೆಯನ್ನೇ ಅತಂತ್ರಗೊಳಿಸಿರುವ ದಾರುಣ ಕಥೆಯದು. ಕೇವಲ ಶರಾವತಿ ಮಾತ್ರವಲ್ಲ. ಕಬಿನಿ, ಹೇಮಾವತಿ, ತುಂಗಭದ್ರಾ, ವಾರಾಹಿ, ಸೀಬರ್ಡ್, ಕೈಗಾ, ಕಾಳಿ, ಆಲಮಟ್ಟಿ, ಕಾರಂಜಾ, ಘಟಪ್ರಭಾ, ಮಲಪ್ರಭಾ ಹೀಗೆ ಎಲ್ಲ ರಾಜ್ಯ- ರಾಷ್ಟ್ರ ಯೋಜನೆಗಳ ಸಂತ್ರಸ್ತರ ಬದುಕೂ ಇದೇ ಆಗಿದೆ.
ಯಾವುದೇ ಯೋಜನೆಗಳ ಭೂಸ್ವಾಧೀನ ಮತ್ತು ಪುನರ್ವಸತಿ ಎನ್ನುವುದು ಸಂತ್ರಸ್ತರಾಗುವ ಜನತೆಯ ಭವಿಷ್ಯತ್ತಿನ ಬದುಕು ಇನ್ನಷ್ಟು ಉಜ್ವಲವಾಗಬೇಕು ಎನ್ನುವುದು ಕಲ್ಯಾಣ ರಾಜ್ಯದ ಕಲ್ಪನೆ. ಆದರೆ ನಾಡ ಅಭಿವೃದ್ಧಿಗಾಗಿ ತ್ಯಾಗ ಮಾಡಿದವರ ಬದುಕು ಮಾತ್ರ ಕರ್ನಾಟಕದಲ್ಲಂತೂ ಬೀದಿಪಾಲು. ಸರ್ಕಾರಿ ವ್ಯವಸ್ಥೆ ಹೇಗಿದೆ ಎಂದರೆ ಎಪ್ಪತ್ತು ವರ್ಷಗಳ ಹಿಂದೆ ಭೂಮಿ, ಮನೆ ಕಳೆದುಕೊಂಡವರಿಗೆ ತುಂಡು ಭೂದಾಖಲೆಯನ್ನು ಪಡೆಯಲೂ ಸಾಧ್ಯವಾಗಿಲ್ಲ.
ಈ ವಿಷಯ ತಕ್ಷಣ ಪ್ರಸ್ತಾಪಿಸಲು ಕಾರಣವೆಂದರೆ ಈಗ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಈ ಗಂಭೀರವಾದ ಸಮಸ್ಯೆ ಸಂತ್ರಸ್ತರ ಭಾಗದ ಪ್ರತಿನಿಧಿಗಳಿಂದೇನೋ ಬಂತು. ಆಗ ಸರ್ಕಾರ ನೀಡಿರುವ ಉತ್ತರ ಮಾತ್ರ ಸಂತ್ರಸ್ತರ ಬದುಕಿನಲ್ಲಿ ಕರಾಳತೆಯನ್ನೇ ಹೆಚ್ಚಿಸಿದಂತಿದೆ.
ಏಕೆಂದರೆ ಈ ಸಂತ್ರಸ್ತರಿಗೆ ಜಮೀನು ನೀಡಿರುವ ಬಗ್ಗೆ, ಪುನರ್ವಸತಿ ಕಲ್ಪಿಸಿರುವ ಬಗ್ಗೆ ಸಂಬಂಧಿಸಿದ ಇಲಾಖೆಯಲ್ಲಿ ದಾಖಲೆಗಳೇ ಇಲ್ಲ. ಹಾಗಾಗಿ ಜನರೇ ದಾಖಲೆ ಕೊಡಲಿ, ನಂತರ ಪರಿಶೀಲಿಸುತ್ತೇವೆ ಎನ್ನುವದು ಜವಾಬ್ದಾರಿ ಸರ್ಕಾರದ ಬೇಜವಾಬ್ದಾರಿ ಉತ್ತರ!.
ವಿಧಾನಸಭೆಯ ಅರ್ಧದಷ್ಟು ಪ್ರತಿನಿಧೀಗಳು ಇಂತಹ ಸಂತ್ರಸ್ತರ ಪ್ರದೇಶದಿಂದ, ಅವರ ಕಷ್ಟನಷ್ಟ ನೋಡಿ ಮತಯಾಚಿಸಿ, ಭರವಸೆ ನೀಡಿ ಗೆದ್ದು ಬಂದವರಿದ್ದಾರೆ.ವಿಧಾನಸಭೆಯಲ್ಲಿ ಈ ಬಗ್ಗೆ ಪ್ರಶ್ನಿಸಿದರೆ ಒಂದು ಸಾಂತ್ವನಪರ ಬದುಕಿನ ಭರವಸೆ ನೀಡುವ ಪ್ರಕ್ರಿಯೆ, ಹೋಗಲಿ, ಭರವಸೆಯ ಮಾತು ಕೂಡ ಈ ಸರ್ಕಾರದಿಂದ ಬರಲಿಲ್ಲ. ಜವಾಬ್ದಾರಿ ಹೊತ್ತ ಕಂದಾಯ ಸಚಿವರು, ದಾಖಲೆ ಇದ್ದರೆ ಕೊಡಿ, ನಮ್ಮಲ್ಲಿ ಸಹಿ ಇಲ್ಲದೆಯೇ ಭೂಮಿ ಹಂಚಲಾಗಿದೆ... ಅವರೇ ದಾಖಲೆಗಳನ್ನು ಕೊಡಲಿ... ಹಗರಣಗಳು ನಡೆದಿವೆ... ಒಂದೊಂದು ಕುಟುಂಬದಲ್ಲಿ ಮೂರು ನಾಲ್ಕು ಜನ ಪಡೆದವರಿದ್ದಾರೆ' ಎನ್ನುವ ಉಡಾಫೆಯೇ ಬಂತು. ಆರೇಳು ದಶಕಗಳ ಇಂತಹ ಸಮಸ್ಯೆ ನಿವಾರಣೆಗೆ ಓರ್ವ ಹಿರಿಯ ಐಎಎಸ್ ಅಧಿಕಾರಿಯನ್ನು ನೇಮಕ ಮಾಡಿ ಒಂದು ವ್ಯವಸ್ಥಿತ ಹೊಣೆಗಾರಿಕೆ ಮಾಡೋಣ; ಓರ್ವ ಸೆಟ್ಲ್ಮೆಂಟ್ ವಿಶೇಷಾಧಿಕಾರಿ ನೇಮಿಸೋಣ’ ಎನ್ನುವ ಸ್ಪೀಕರ್ ಸೂಚನೆಗೂ (ಪ್ರಸಕ್ತ ವಿಧಾನಸಭಾಧ್ಯಕ್ಷರು ಮುಳುಗಡೆ ಯೋಜನೆ ಸಂತ್ರಸ್ತರ ನೋವನ್ನು ಅತೀ ಹತ್ತಿರದಿಂದ ಬಲ್ಲವರು; ರಾಜ್ಯದಲ್ಲಿ ಅತೀ ಹೆಚ್ಚು ರಾಷ್ಟ್ರೀಯ- ರಾಜ್ಯ ಯೋಜನೆಗಳಿಗಾಗಿ ಮನೆ ಮಠ ಕಳೆದುಕೊಂಡು ನಿರ್ಗತಿಕರಾದ ಜಿಲ್ಲೆಯವರು) ನೋಡೋಣ, ಪರಿಶೀಲಿಸೋಣ, ಚರ್ಚಿಸೋಣ, ಕಾನೂನು ಏನು ಹೇಳುತ್ತದೆ ತಿಳಿಯೋಣ ಇಂತಹ ಮಾತುಗಳು ಕೇಳಿಬಂದವೇ ವಿನಾ ಅವರ ಧ್ವನಿಗಂತೂ ಸಕಾರಾತ್ಮಕ ಸ್ಪಂದನೆಯೇ ಸಿಗಲಿಲ್ಲ.
ಒಂದು ಜವಾಬ್ದಾರಿ ಸರ್ಕಾರಕ್ಕೆ ಇರಬೇಕಾದುದು ನಾಡಜನತೆಯ ನೋವು ಆಲಿಸಿ ಪರಿಹರಿಸುವ ಅಂತಃಕರಣ. ಇದು ಕಂಡು ಬರಲೇ ಇಲ್ಲ.
ಇದೇ ವಿಧಾನಸಭೆಯಲ್ಲಿ ಮಂಡಿಸಿದ ಕೃಷಿಭೂಮಿಯನ್ನು ಕೃಷಿಯೇತರವನ್ನಾಗಿ ಪರಿವರ್ತಿಸುವ ಮಸೂದೆಗೆ ತಿದ್ದುಪಡಿ ಎಲ್ಲ ರಾಜಕೀಯ ಪಕ್ಷಗಳ ಮುಖಂಡರ ಸಹಮತದೊಂದಿಗೆ ಕೆಲವೇ ಕ್ಷಣದಲ್ಲಿ ಒಪ್ಪಿಗೆಯಾಯಿತು!. ಮಸೂದೆಯಲ್ಲಿರುವುದು ಕೃಷಿ ಭೂಮಿಯ ಮಾಲೀಕ ತನ್ನ ಭೂಮಿಯಲ್ಲಿ ಕೃಷಿಯೇತರ ಚಟುವಟಿಕೆ ನಡೆಸಲು (ಎನ್‌ಎ ಮಾಡಲು) ಕೆಲ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದರೆ ಏಳು ದಿನದಲ್ಲಿ ಅದಕ್ಕೆ ಪರವಾನಗಿ ಬಾರದಿದ್ದರೆ ಅದನ್ನು ಪರಿವರ್ತಿತ ಭೂಮಿ ಎಂದು (ಡೀಮ್ಡ್) ಒಪ್ಪಿತ ದಾಖಲೆ ಎಂದು ಪರಿಗಣಿಸುವುದು !
ಎಷ್ಟು ಅತ್ಯುತ್ಸಾಹದಿಂದ ಈ ಕಾಯ್ದೆ ಪಾಸ್ ಆಯಿತೆಂದರೆ, ಅಯ್ಯೋ ಅತ್ಯುತ್ತಮ ಕಾರ್ಯ, ಬೆಂಬಲಿಸುತ್ತೇವೆ' ಎಂದು ಪ್ರಶಂಸಿಸಿದವರೇ ಹೆಚ್ಚು. ನಿಜ. ಈ ಕಾರ್ಯದ ಹಿಂದಿನ ಅಪಾಯವನ್ನು ಮತ್ತು ಇನ್ನಷ್ಟು ಭ್ರಷ್ಟತೆಯನ್ನು ತಿಳಿದು ತಿಳಿದೂ ಯಾವೊಬ್ಬ ಪ್ರತಿನಿಧಿಯೂ ಎತ್ತಲಿಲ್ಲ. ಎರಡನೆಯದ್ದಾಗಿ ಇದರಿಂದ ಇನ್ನಷ್ಟು ಹೆಚ್ಚುವ ಜನರ ಗೋಳಿನ ಬಗ್ಗೆ, ಭವಿಷ್ಯತ್ತಿನಲ್ಲಿ ಅವರನ್ನು ಕಾನೂನಿನ ಕೊಂಡಿಯಲ್ಲಿ ಸಿಲುಕಿಸಿ ಒದ್ದಾಡಿಸುವ ದುಸ್ಥಿತಿಯನ್ನು ನಮ್ಮ ಶಾಸಕರು ಗಮನಿಸಲೇ ಇಲ್ಲ. ಈ ತಿದ್ದುಪಡಿಯ ಹಿಂದಿರುವುದು ಕೃಷಿಕನಲ್ಲ. ರಿಯಲ್ ಎಸ್ಟೇಟ್ ದಂಧೆಕೋರರು. ನಗರ ಪ್ರದೇಶದ ಅಂಚಿನಲ್ಲಿರುವ ಕೃಷಿ ಭೂಮಿಯನ್ನು ಕೃಷಿಯೇತರವಾಗಿ ಪರಿವರ್ತಿಸುವ ಅರ್ಜಿಯನ್ನು ಸಲ್ಲಿಸುವವರು ರಿಯಲ್ ಎಸ್ಟೇಟ್ ದಂಧೆಯಲ್ಲಿ ಇರುವವರು. ಇದಕ್ಕೆ ಅಧಿಕಾರಿಗಳ ಮಟ್ಟದಲ್ಲಿ ಮತ್ತು ಈಗಿರುವ ವ್ಯವಸ್ಥೆಯಲ್ಲಿ ತೊಡಕಿದೆ. ಸಾಕಷ್ಟು ಬಿಗಿ ಕಾಯ್ದೆ ಕಟ್ಟಳೆಗಳಿವೆ. ಹಾಗೆಯೇ ಅವುಗಳ ಪ್ರತಿ ಪ್ರಕರಣದ ಹಿಂದೆ ಕೋಟ್ಯಂತರ ರೂಪಾಯಿ ವಹಿವಾಟು, ಲಂಚ ರುಷುವತ್ತುಗಳಿವೆ. ಹೀಗಾಗಿ ತಮ್ಮ ಕೃಷಿ ಭೂಮಿ ಏಳು ದಿನದಲ್ಲಿ ಪರಿವರ್ತನೆಯಾಗದಿದ್ದರೆ, ಅದನ್ನು ಡೀಮ್ಡ್- ಘೋಷಿತ ಪರಿವರ್ತನೆ ಎಂಬುದಾಗಿ ಪರಿಗಣಿಸಬೇಕು ಎನ್ನುವುದು ತಿದ್ದುಪಡಿ. ಆದರೆ ಇದರಿಂದಾಗುವ ಪರಿಣಾಮ ಹತ್ತಾರು. ಮೊದಲನೆಯದ್ದು ಇನ್ನಷ್ಟು ಭ್ರಷ್ಟಚಾರಕ್ಕೆ ಆಸ್ಪದವಾಗುತ್ತದೆ. ಡೀಮ್ಡ್ ಪರಿವರ್ತನೆಯಾಗುತ್ತದೆ ಎಂದು ರೈತನೋ ಅಥವಾ ಆತನ ಹೆಸರಿನಲ್ಲಿ ವ್ಯವಹಾರ ನಡೆಸುವವನೋ ಸದ್ಯ ಖುಷಿ ಪಡಬಹುದು. ಆದರೆ ದಾಖಲೆಗೆ ಸೇರಿಸಿಕೊಳ್ಳುವವ ಅದೇ ಜಿಲ್ಲಾಧಿಕಾರಿ. ದಾಖಲೆಯಲ್ಲಿ ನಮೂದಿಸುವವರು ಯಾರು? ಡೀಮ್ಡ್ ಪರಿವರ್ತನೆ ಭೂಮಿ ಕೊಂಡುಕೊಳ್ಳುವವರು ಯಾರು? ಹಾಗೆಯೇ ಮುಂದೆ ದಾಖಲಾತಿಗಾಗಿ ಆತ ಅಲೆದಾಡುವುದು ತಪ್ಪುವುದಿಲ್ಲ. ಅದೇ ರೀತಿ ದಂಡ ತುಂಬುವುದೂ ತಪ್ಪುವುದಿಲ್ಲ. ಇದರಿಂದ, ಕಾನೂನು ಕುಣಿಕೆಯಿಂದ, ಪಾರಾಗಲು ಮತ್ತೆ ಲಂಚ ರುಷುವತ್ತಿನ, ಭ್ರಷ್ಟಾಚಾರದ ಹಾವಳಿಯೇ ತಲೆ ಎತ್ತಲಿದೆ. ಈಗ ಹೇಗೆ ಅಕ್ರಮ ಭೂಮಿ, ಗೋಮಾಳ, ಅಧಿಕೃತ ಅನಧಿಕೃತ, ಅಕ್ರಮ- ಸಕ್ರಮ ಇಂತಹ ಹಲವು ಪ್ರಕರಣಗಳಿವೆಯಲ್ಲ, ಅದರೊಟ್ಟಿಗೆ ಈ ಡೀಮ್ಡ್ ಪರಿವರ್ತನೆ ಪ್ರಕರಣವೊಂದು ಶುರುವಾಗುತ್ತದೆ ಅಷ್ಟೇ. ಇದು ಸರ್ಕಾರಕ್ಕೆ, ತಿದ್ದುಪಡಿ ತಂದ ಕಂದಾಯ ಸಚಿವರಿಗೆ ತಿಳಿಯದುದೇನಲ್ಲ. ರಿಯಲ್ ಎಸ್ಟೇಟ್ ಮಾಫಿಯಾ ಥೈಲಿಯ ಮುಂದೆ ಇವೆಲ್ಲ ಚುನಾವಣೆಗೆ ಸಿದ್ಧವಾಗುವ ಸರ್ಕಾರಕ್ಕೆ ಟಾನಿಕ್‌ಗಳಲ್ಲವೇ? ಇದೇ ಕಂದಾಯ ಸಚಿವರು ಕಳೆದ ಒಂದೂವರೆ ವರ್ಷದಿಂದ ಎಪ್ಪತ್ತೆರಡು ಗಂಟೆಯಲ್ಲಿ ಎನ್‌ಎ, ಭೂಪರಿವರ್ತನೆ, ಒಂದು ವಾರದಲ್ಲಿ ಮನೆ ಬಾಗಿಲಿಗೆ ಪೋಡಿ, ಭೂವ್ಯಾಜ್ಯಗಳ ನಿವಾರಣೆ, ಗ್ರಾಮ ವಾಸ್ತವ್ಯದಲ್ಲಿ ಪಿಂಚಣಿ ಸ್ಥಳದಲ್ಲೇ ಇತ್ಯರ್ಥ ಎನ್ನುವ ಹತ್ತಾರು ಘೋಷಣೆಗಳನ್ನು ಮಾಡುತ್ತಲೇ ಇದ್ದಾರೆ. ಇಂದಿನವರೆಗೆ ಯಾವೊಬ್ಬನಿಗೆ ಲಂಚ ನೀಡದೇ ಪೋಡಿಯಾಗಿಲ್ಲ. ಭೂ ದಾಖಲೆ ದೊರೆತಿಲ್ಲ.ಸಕಾಲ’ದಲ್ಲಿಯೂ ಪರಿಹಾರ ಸಿಕ್ಕಿಲ್ಲ.
ಎಲ್ಲ ಪ್ರಕ್ರಿಯೆಗಳು ಏನಾದರೂ ದೊರಕಿದ್ದರೆ ಪೂರ್ವಭಾವಿಯಾಗಿಯೇ ವ್ಯವಹಾರ ಕುದುರಿಸಿಕೊಂಡಿರುವುದರಿಂದ. ಇವೆಲ್ಲ ತಿಳಿದೂ ಕೂಡ ಪ್ರತಿಪಕ್ಷದವರೂ ಈ ಭೂ ಪರಿವರ್ತನೆ ತಿದ್ದುಪಡಿ ಕಾಯ್ದೆಗೆ ಒಪ್ಪಿಗೆ ಸೂಚಿಸಿದ್ದಾರೆ ಅಲ್ಲವೇ? ಇದು ಎಲ್ಲರ ಪ್ರಬಲ ಆರ್ಥಿಕ ಮೂಲದಲ್ಲಿ ಒಂದು.
ಹಾಗಂತ ಕಾಯ್ದೆಯ ಉದ್ದೇಶ- ಹೆಸರು ಸರಳೀಕರಣ. ಕಳೆದ ಹತ್ತು ವರ್ಷಗಳಿಂದ ಸಕಾಲ' ಯೋಜನೆ ಈ ರಾಜ್ಯದಲ್ಲಿ ಜಾರಿಯಾಗಿದೆ. ಜನರ ಪ್ರತಿ ಕೆಲಸಕ್ಕೂ ಅವಧಿ ನಿಗದಿ ಮಾಡಲಾಗಿದೆ. ಸಕಾಲದಲ್ಲಿ ಅರ್ಜಿ ಸ್ವೀಕರಿಸುತ್ತಾರೆ. ನಿಗದಿತ ಅವಧಿಯಲ್ಲಿ ಈ ಅರ್ಜಿ ಇತ್ಯರ್ಥಗೊಳಿಸದೇ ಇದ್ದರೆ ಆ ಅಧಿಕಾರಿ ದಂಡವನ್ನು ತೆರಬೇಕು. ಇದುಸಕಾಲ’ದ ಉದ್ದೇಶ. ಕೇವಲ ಹತ್ತು ವರ್ಷದಲ್ಲಿ ಇದರ ಸ್ಥಿತಿ ಏನಾಗಿದೆ ಎಂದರೆ ಸಕಾಲ' ನಿರ್ಕಾಲವಾಗಿದೆ ! ಕಾರಣ, ಕೊಟ್ಟ ಅರ್ಜಿಗಳನ್ನು ತಿರಸ್ಕರಿಸುವ ಅಥವಾ ಪ್ರತಿಕ್ರಿಯೆ ನೀಡದೇ ಹಾಗೆಯೇ ಅಲೆದಾಡಿಸುವುದು ಹೆಚ್ಚಿದೆ. ಲಕ್ಷಾಂತರ ಅರ್ಜಿಗಳು ಸಕಾಲ ಯೋಜನೆಯಡಿ ಸಲ್ಲಿಕೆಯಾದವು. ಇವುಗಳಲ್ಲಿ ಬಹುತೇಕವು ಕಾರಣವಿಲ್ಲದೇ ಬಾಕಿ ಉಳಿದಿವೆ. ಕಾಲ ಮಿತಿ ಮೀರಿವೆ. ನೆಪ ಹೇಳಿ ತಿರಸ್ಕೃತವಾದಂಥವೇ ಹೆಚ್ಚು. ಅಲೆದಾಟ ಇನ್ನಷ್ಟು ಹೆಚ್ಚಿದೆ. ಎಲ್ಲ ಇಲಾಖೆಗೆ ಮೂಲ ಕಂದಾಯ. ಎಲ್ಲ ದಾಖಲೆಗಳನ್ನು ಕಾಪಿಟ್ಟುಕೊಳ್ಳುವುದು ಕಂದಾಯ ಇಲಾಖೆ ಎನ್ನುವ ಮಾತು, ಅವರಲ್ಲಿಯೇ ದಾಖಲೆ ಇಲ್ಲವಲ್ಲ! ಹೇಗೆ ಮಿಸ್ ಆಗುತ್ತದೆ? ಎಂದು ಹಿರಿಯ ಶಾಸಕರೊಬ್ಬರು ಪ್ರಶ್ನಿಸಿದರೆ ಅದಕ್ಕೂ ಉತ್ತರ ದೊರೆಯಲಿಲ್ಲ. ಈ ಸಮಸ್ಯೆಗಳ ನಿವಾರಣೆಗೆ ಇಂದಲ್ಲ, ಕೆಂಗಲ್ ಹನುಮಂತಯ್ಯ ಅವರಿಂದ ಹಿಡಿದು ಪ್ರಸ್ತುತ ಬೊಮ್ಮಾಯಿಟೂ’ವರೆಗೆ ಇದೇ ನೆಪ, ಅದೇ ಹಾಡು, ಅದೇ ಗೋಳು !! ಇಂದು ಶಾಸನ ಸಭೆ ನೋಡಿದಾಗ ಜನಪರ ಧ್ವನಿ ಎತ್ತಿದ ಶಾಂತವೇರಿ ಗೋಪಾಲಗೌಡ, ನಂಜುಂಡಸ್ವಾಮಿ, ಕಡಿದಾಳು ಶಾಮಣ್ಣ, ಕೃಷ್ಣಯ್ಯರ್, ರೈತಪರ ಹೋರಾಟ ನಡೆಸಿ ಧ್ವನಿ ನೀಡಿದ ಇಂಥಹ ಮಹನೀಯರು ನೆನಪಾಗುತ್ತಾರೆ
ದೇವೇಗೌಡರು ಮಾಜಿ ಪ್ರಧಾನಿಯಾದರೇನು? ಸಂಸತ್ತಿನಲ್ಲಿ ಮೂರು ಸಾರೆ ಪ್ರತಿನಿಧಿಸಿದ ರಾಘವೇಂದ್ರರೇನು? ಸಂತ್ರಸ್ತರ ಮತಗಳಿಸಿ ಪರಿಹರಿಸುವ ಭರವಸೆಯೊಂದಿಗೆ ಗೆದ್ದು ಬಂದ ಶಾಸಕರೇನು? ಎಲ್ಲರೂ ರಾಜಕೀಯ ವ್ಯವಸ್ಥೆಯಲ್ಲಿ ಧ್ವನಿ ಉಡುಗಿ ಹೋದವರೇ. ಈ ಅಮಾಯಕ ಜನರ ಕಣ್ಣೀರಿಗೆ ಈ ವ್ಯವಸ್ಥೆಯಲ್ಲಿ ಬಹುಶಃ ಬಲವಿಲ್ಲದಂತಾಗಿದೆ.
ಜನರಿಗೆ, ಅವರ ಸಂಕಷ್ಟಕ್ಕೆ ಮಿಡಿಯಲು ಇಲ್ಲ ಬಿಡಿ ಈ ಸೌಧ.