ಸರ್ಕಾರಿ ಗೌರವದೊಂದಿಗೆ ದೊಡ್ಡ ಸಾಹುಕಾರ ಅಂತ್ಯಸಂಸ್ಕಾರ

ಉಮೇಶ ಕತ್ತಿ
Advertisement

ಬೆಳಗಾವಿ: ಹೃದಯಾಘಾತದಿಂದ ಮೃತರಾಗಿದ್ದ ಸಚಿವ ಉಮೇಶ ಕತ್ತಿಯವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ತವರೂರಾದ ಹುಕ್ಕೇರಿ ತಾಲೂಕಿನ ಬೆಲ್ಲದಬಾಗೇವಾಡಿ ಗ್ರಾಮದಲ್ಲಿ ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಅಸಂಖ್ಯ ಅಭಿಮಾನಿಗಳ ಶೋಕಸಾಗರದ ಮಧ್ಯೆ ಬುಧವಾರ ರಾತ್ರಿ ನೆರವೇರಿತು.
ರಾಜ್ಯ ಕಂಡ ಓರ್ವ ಧೀಮಂತ ನಾಯಕ, ಉತ್ತರ ಕರ್ನಾಟಕದ ಮೇರು ಧ್ವನಿಯಾಗಿದ್ದ ಆಹಾರ ಮತ್ತು ಅರಣ್ಯ ಇಲಾಖೆ ಸಚಿವ ಉಮೇಶ ಕತ್ತಿಯವರು ಮಂಗಳವಾರ ರಾತ್ರಿ ಬೆಂಗಳೂರಿನ ಡಾಲರ್ಸ್‌ ಕಾಲೋನಿಯ ತಮ್ಮ ನಿವಾಸದ ಬಾತ್‌ರೂಮ್‌ನಲ್ಲಿ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದರು. ನಂತರ ಅವರನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಮೃತರಾಗಿದ್ದರು. ರಾತ್ರೋ ರಾತ್ರಿ ಈ ಸುದ್ದಿ ತಿಳಿಯುತ್ತಿದ್ದಂತೆ ಇಡೀ ರಾಜ್ಯವೇ ಶಾಕ್ ಆಗಿತ್ತು. ಈ ವೇಳೆ ಎಂಎಸ್ ರಾಮಯ್ಯ ಆಸ್ಪತ್ರೆಗೆ ಸಿಎಂ ಬೊಮ್ಮಾಯಿ ಸೇರಿದಂತೆ ಹಲವು ಸಚಿವರು, ಮುಖಂಡರು ದೌಡಾಯಿಸಿ, ಅಂತಿಮ ದರ್ಶನ ಪಡೆದುಕೊಂಡರು.