ಬಾಗಲಕೋಟೆ: ʻನನ್ನ ಮೇಲೆ ಮಾಡಿರುವ ಆರೋಪ ಸಾಬೀತು ಮಾಡಿದರೆ ಇವತ್ತೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವೆ. ಸಾಬೀತು ಮಾಡದೇ ಇದ್ರೆ ನೀವು ಸನ್ಯಾಸತ್ವ ತೊರೆದು ರಾಜಕೀಯಕ್ಕೆ ಬನ್ನಿʼ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿಗೆ ಸಚಿವ ಮುರುಗೇಶ್ ನಿರಾಣಿ ಸವಾಲು ಹಾಕಿದ್ದಾರೆ.
ಬಾಗಲಕೋಟೆ ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶುಕ್ರವಾರ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಸ್ವಾಮೀಜಿಯವರು, “ಪಂಚಮಸಾಲಿ 2ಎ ಮೀಸಲಾತಿ ಘೋಷಣೆ ಆಗದೇ ಇರಲು ಬಾಗಲಕೋಟೆ ಜಿಲ್ಲೆಯ ನಮ್ಮ ಸಮಾಜದ ಸಚಿವರು ಕಾರಣ’’ ಎಂದು ಆರೋಪಿಸಿದ್ದರು. ಈ ಕುರಿತಂತೆ ನಿರಾಣಿಯವರು ಸ್ವಾಮೀಜಿ ವಿರುದ್ಧ ಗರಂ ಆಗಿದ್ದಾರೆ. “ಸ್ವಾಮೀಜಿಗಳ ಬಗ್ಗೆ ಗೌರವ ಇದೆ. ನನ್ನ ಬಗ್ಗೆ ಎಷ್ಟೇ ಮಾತಾಡಿದರೂ, ಇವತ್ತು ಎಲ್ಲೆ ಭೇಟಿ ಮಾಡಿದರೂ ನಿಮ್ಮ ಕಾಲಿಗೆ ನಮಸ್ಕಾರ ಮಾಡ್ತೇನೆ’’ ಎಂದ ಅವರು, “ನಾನು ಮೊನ್ನೆ ಪಂಚಮಸಾಲಿ ಮೀಸಲಾತಿ ಘೋಷಿಸಲು ಅಡ್ಡಿಪಡಿಸಿದೆ ಎನ್ನಲು ಸಾಕ್ಷಿ ಕೊಟ್ಟರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದರು.