ಬೆಂಗಳೂರು: ಬದಲಾವಣೆ ಮಾಡಿದರೆ ಪಕ್ಷದ ಚುನಾವಣಾ ರಣತಂತ್ರದ ಮೇಲೆ ಪರಿಣಾಮ ಬೀರಬಹುದೆಂಬ ಕಾರಣದಿಂದ ಸದ್ಯಕ್ಕೆ ನಳೀನ್ ಕುಮಾರ್ ಕಟೀಲ್ ಅವರನ್ನೇ ಆರು ತಿಂಗಳು ಮುಂದುವರೆಸುವ ನಿರ್ಧಾರಕ್ಕೆ ವರಿಷ್ಠರು ಬಂದಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದ ಹಿನ್ನೆಲೆಯಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎಂಬ ಪಕ್ಷದ ನಿಯಮದಂತೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹಾಗಾಗಿ 2019ರ ಆ. 27ರಂದು ಸಂಸದ ನಳೀನ್ ಕುಮಾರ್ ಕಟೀಲ್ ಹಂಗಾಮಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದರು.
ಒಂದು ವೇಳೆ ಈಗ ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡಿದಲ್ಲಿ ಪದಾಧಿಕಾರಿಗಳ ತಂಡವನ್ನೂ ಬದಲಿಸಬೇಕಾಗಲಿದೆ. ಜಿಲ್ಲಾ ಘಟಕಗಳನ್ನೂ ಪುನರ್ ನೇಮಕ ಮಾಡಬೇಕಾಗಲಿದೆ.
ಸಹಜವಾಗಿಯೇ ಹೊಸ ಅಧ್ಯಕ್ಷರು ಬಂದ ನಂತರ ಹೊಸ ತಂಡವನ್ನು ಕಟ್ಟಲೇಬೇಕಾಗುತ್ತದೆ. ಹಳೆಯ ತಂಡವನ್ನು ಮುನ್ನಡೆಸುವುದು ಹೊಸ ಅಧ್ಯಕ್ಷರಿಗೆ ಸವಾಲಿನ ಕೆಲಸ. ಹಾಗಾಗಿ ಚುನಾವಣಾ ಹೊಸ್ತಿಲಲ್ಲಿ ಹೊಸ ತಂಡ ರಚಿಸಿ ಅಖಾಡಕ್ಕಿಳಿಯುವ ದುಸ್ಸಾಹಸದ ಬದಲು ಇರುವ ತಂಡವನ್ನೇ ಬಲಿಷ್ಠಗೊಳಿಸಿ ಚುನಾವಣೆ ಎದುರಿಸುವುದು ಸೂಕ್ತ ಎಂದು ಹೈಕಮಾಂಡ್ ನಾಯಕರು ನಿರ್ಧರಿಸಿದ್ದು, ಈ ಕುರಿತ ಸಂದೇಶವನ್ನೂ ರಾಜ್ಯ ಘಟಕಕ್ಕೆ ರವಾನಿಸಿದ್ದಾರೆ.
ಈಗಾಗಲೇ ಹೈಕಮಾಂಡ್‍ನಿಂದ ಕಟೀಲ್ ಅವಧಿ ವಿಸ್ತರಣೆ ಕುರಿತು ರಾಜ್ಯ ಘಟಕಕ್ಕೆ ಮಾಹಿತಿ ಬಂದಿದ್ದು, ಚುನಾವಣೆವರೆಗೂ ಮುಂದುವರೆಯಲು ಕಟೀಲ್‍ಗೆ ಸೂಚನೆ ನೀಡಲಾಗಿದೆ. ಹೈಕಮಾಂಡ್‍ನಿಂದ ಈ ಸಂದೇಶ ಬರುತ್ತಿದ್ದಂತೆ ಪಕ್ಷದ ಹಿರಿಯ ನಾಯಕ ಹಾಗು ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ ಅವರ ನಿವಾಸಕ್ಕೆ ಕಟೀಲ್ ದೌಡಾಯಿಸಿದ್ದರು. ಕಳೆದ ವಾರ ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿ ಹೈಕಮಾಂಡ್ ಕಳುಹಿಸಿದ್ದ ಸಂದೇಶದ ಬಗ್ಗೆ ಸಮಾಲೋಚನೆ ನಡೆಸಿದ್ದರು ಎಂದು ತಿಳಿದುಬಂದಿದೆ.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಸರುಗಳು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಳಿ ಬಂದಿದ್ದವು. ಚುನಾವಣಾ ದೃಷ್ಟಿಯಿಂದ ಸಂಘ ಪರಿವಾರ ಒಪ್ಪುವ, ಖಡಕ್ ಹಿಂದುತ್ವವಾದಿಯನ್ನೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಗುತ್ತದೆ ಎನ್ನಲಾಗಿತ್ತು.
ಆದರೆ ವಿಧಾನಸಭೆ ಚುನಾವಣೆವರೆಗೂ ರಾಜ್ಯಾಧ್ಯಕ್ಷರ ಬದಲಾವಣೆಯನ್ನು ಹೈಕಮಾಂಡ್ ಮುಂದೂಡಿಕೆ ಮಾಡಿದ್ದು, ಚುನಾವಣೆ ನಂತರ ಹೊಸ ರಾಜ್ಯಾಧ್ಯಕ್ಷರ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಬಹುದು. ಆದರೆ ಸದ್ಯಕ್ಕೆ ಕಟೀಲ್ ಸ್ಥಾನ ಅಬಾಧಿತವಾಗಿದೆ.