ಸಣ್ಣ ವೃತ್ತಿಪರ ಸಮಾಜಗಳ ಅಭಿವೃದ್ದಿಗೆ 400 ಕೋಟಿ ಅನುದಾನ

CM
Advertisement

ಬೆಳಗಾವಿ: ಕಡಿಮೆ ಜನಸಂಖ್ಯೆಯ ಸಮಾಜಗಳಿಗೆ ನ್ಯಾಯ ಒದಗಿಸುವ ದೃಷ್ಟಿಯಿಂದ ಮಾಳಿ, ಮಾಲಗಾರದಂತಹ ಸಣ್ಣ ವೃತ್ತಿಪರ ಸಮಾಜಗಳ ಅಭಿವೃದ್ಧಿಗೆ ಆಯವ್ಯಯದಲ್ಲಿ ಒಟ್ಟು 400 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಅಖಿಲ ಕರ್ನಾಟಕ ಮಾಳಿ/ಮಾಲಗಾರ ಸಮಾಜದ ರಾಜ್ಯ ಮಟ್ಟದ ದ್ವಿತೀಯ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಮತ್ತು ಯೋಗ್ಯ ಬೆಲೆ :
ಕಡಿಮೆ ಜನಸಂಖ್ಯೆಯಿರುವ ವೃತ್ತಿಪರ ಸಣ್ಣ ಸಮಾಜಗಳು ಎಲೆಮರೆಯ ಕಾಯಿಯಂತೆ ರಾಜ್ಯದ ಆರ್ಥಿಕತೆಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಲೇ ಬಂದಿದ್ದಾರೆ. ಮಾಳಿ, ಮಾಲಗಾರ ಸಮಾಜ ಸೇರಿದಂತೆ ದಿನನಿತ್ಯದ ಅವಶ್ಯಕತೆಯ ಉತ್ಪನ್ನಗಳ ಉತ್ಪಾದನೆಯಲ್ಲಿ ತೊಡಗಿರುವಂತಹ ಸಮಾಜಗಳಿಗೆ ಮುಂದಿನ ಆಯವ್ಯಯದಲ್ಲಿ ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸಲಾಗುವುದು. ಮಾಳಿ/ ಮಾಲಗಾರ ನೇತೃತ್ವದ ಸಮಾಜಗಳ ಅಭಿವೃದ್ಧಿಗೆ ವಿಶೇಷ ನಿಗಮ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು. ಈ ಸಮಾಜ ಉತ್ಪಾದಿಸುವ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ, ಯೋಗ್ಯ ಬೆಲೆ ಒದಗಿಸಲು ಅವರ ಬಳಿಯೇ ಬಂದು ಅವರ ಉತ್ಪನ್ನಗಳನ್ನು ಖರೀದಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದರು.
ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ :
21ನೆಯ ಶತಮಾನ ಜ್ಞಾನದ ಶತಮಾನ. ಮಾಳಿ ಮಾಲಗಾರರ ಮಕ್ಕಳಿಗೆ ಉತ್ತಮ ಶಿಕ್ಷಣ ಪಡೆಯುವುದು ಬಹಳ ಮುಖ್ಯ. ನಿಗಮದ ಮೂಲಕ ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ,ಯುವಕರಿಗೆ ಸ್ವಯಂ ಉದ್ಯೋಗ, ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿವೇತನ ನೀಡಲಾಗುವುದು. ಸಮಾಜದ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವುದು ಸರ್ಕಾರ ಆದ್ಯತೆ. ಸಾವಿತ್ರಿಬಾಯಿ ಫುಲೆ ಇದೇ ಸಮಾಜದವರಾಗಿದ್ದು, ಹೆಣ್ಣಮಕ್ಕಳ ಶಿಕ್ಷಣಕ್ಕೆ ಪ್ರಾಶಸ್ತ್ಯ ನೀಡಿದವರು. ದೇಶದ ಪ್ರಥಮ ಮಹಿಳಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುವ ಸಾವಿತ್ರಿಬಾಯಿ ಫುಲೆ ಹೆಸರಿನಲ್ಲಿ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.
ಕಡಿಮೆ ಭೂಮಿಯಲ್ಲಿ ಹೆಚ್ಚು ಉತ್ಪಾದನೆ :
ತೋಟಗಾರಿಕಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಮಾಳಿ ಸಮಾಜ ಉತ್ತಮ ಸೇವೆಯನ್ನು ಸಲ್ಲಿಸುತ್ತಿದೆ. ಅತ್ಯಂತ ಕಡಿಮೆ ಭೂಮಿಯಲ್ಲಿ ಅತಿಹೆಚ್ಚು ಉತ್ಪಾದನೆಯನ್ನು ಸಾಧಿಸುವುದೇ ಮಾಳಿ ಸಮಾಜದ ವಿಶೇಷತೆ. ಇವರ ಮಾದರಿಯನ್ನು ಸಣ್ಣ ರೈತರೂ ಅಳವಡಿಸಿಕೊಳ್ಳಬಹುದು. ಕೇಂದ್ರ ಮತ್ತು ರಾಜ್ಯ ಸರ್ಕಾರ ಸಮಗ್ರ ಕೃಷಿಯ ಬಗ್ಗೆ ಅಧ್ಯಯನ ಕೈಗೊಂಡಿದೆ. ಆದರೆ ಈ ಅಧ್ಯಯನಕ್ಕೆ ಮುಂಚಿತವಾಗಿಯೇ ತೋಟಗಾರಿಕೆಯನ್ನು ಅತ್ಯಂತ ಸಮರ್ಥವಾಗಿ ಮಾಳಿ ಸಮಾಜ ನಿರ್ವಹಿಸುತ್ತಿದೆ. ಮಾಳಿ, ಮಾಲಗಾರ ಸಮಾಜದವರು ಸರಳ ಸಜ್ಜನಿಕೆಯವರಾಗಿದ್ದು, ದುಡಿಮೆಯನ್ನು ನಂಬಿದವರಾಗಿದ್ದಾರೆ. ಸಮಾಜಕ್ಕೆ ರಾಜಕೀಯ ಪ್ರಜ್ಞೆಯಿದ್ದರೆ, ಸಮಾಜದ ಅಭಿವೃದ್ಧಿಯೂ ಸಾಧ್ಯವಾಗುತ್ತದೆ. ಸಮಾಜದ ಏಳಿಗೆಗಾಗಿ ದುಡಿಯುವವರ ಬೆಂಬಲಕ್ಕಾಗಿ ನಿಲ್ಲಬೇಕು. ಈ ಸಮುದಾಯದ ಸೇವೆ ಮಾಡುವವರಿಗೆ ಶಕ್ತಿಯನ್ನು ತುಂಬಬೇಕು ಎಂದರು. ಕಾರ್ಯಕ್ರಮದಲ್ಲಿ ಸಚಿವ ಗೋವಿಂದ ಕಾರಜೋಳ, ಶಾಸಕ ರಾಜೀವ್, ಲಕ್ಷ್ಮಣ ಸವದಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.