ಮಂಗಳೂರು: ಹದಿನಾಲ್ಕು ವರ್ಷಗಳ ಹಿಂದೆ ಕಡಬ ತಾಲೂಕಿನ ಶಿರಾಡಿಯಲ್ಲಿ ನಡೆದಿದ್ದ ತಾಯಿ ಮತ್ತು ಮಗುವಿನ ಕೊಲೆ ಪ್ರಕರಣದ ಆರೋಪಿ ಮತ್ತು ಪುತ್ತೂರಿನ ೫ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಿಂದ ಮರಣದಂಡನೆ ವಿಧಿಸಿರುವ ಆರೋಪಿ ಜಯೇಶ್ ಯಾನೆ ಶಾಕೀರ್ ಯಾನೇ ಸಾಹಿರ್ ಇದೀಗ ಮತ್ತೆ ಸುದ್ದಿಯಲ್ಲಿದ್ದು, ಈತ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಫೋನ್ ಕರೆ ಮಾಡಿ ಜೀವಬೆದರಿಕೆ ಜೊತೆಗೆ ಹಣದ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
೨೦೦೮ರ ಆ.೨ ರಂದು ಅಂದಿನ ಪುತ್ತೂರು ಮತ್ತು ಇಂದಿನ ಕಡಬ ತಾಲೂಕಿಗೆ ಒಳಪಡುವ ಶಿರಾಡಿಯ ಸೌಮ್ಯಾ ಮತ್ತು ಅವರ ಪುತ್ರ ಜಿಷ್ಣು ಎಂಬವರನ್ನು ಕೊಲೆ ಮಾಡಿದ ಆರೋಪವನ್ನು ಜಯೇಶ್ ಎದುರಿಸುತ್ತಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಸುಮಾರು ೨೭ ಸಾಕ್ಷಿಗಳನ್ನು ವಿಚಾರಣೆ ನಡೆಸಿತ್ತು. ಆರೋಪಿಯಾದ ಜಯೇಶ್ನನ್ನು ಅಪರಾಧಿ ಎಂದು ಘೋಷಿಸಿದ ನ್ಯಾಯಾಲಯು ಸೆಕ್ಷನ್ ೪೫೦, ೩೯೨ ಹಾಗೂ ೩೦೨ ಪ್ರಕಾರ ಆರೋಪಿ ಮರಣದಂಡನೆಗೆ ಯೋಗ್ಯವಾದ ಅಪರಾಧ ಎಸಗಿದ್ದಾನೆ ಎಂದು ಪರಿಗಣಿಸಿ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಪುತ್ತೂರಿನ ನ್ಯಾಯಾಲಯದ ಇತಿಹಾಸದಲ್ಲಿ ಮರಣದಂಡನೆಯ ಎರಡನೇ ತೀರ್ಪು ಇದಾಗಿತ್ತು. ಅಂದು ಪ್ರಾಸಿಕ್ಯೂಶನ್ ಪರ ಸರ್ಕಾರಿ ಅಭಿಯೋಜಕ ಉದಯಕುಮಾರ್ ವಾದ ಮಂಡಿಸಿದ್ದರು.
ಶಿರಾಡಿ ಸಮೀಪದ ಪೊಲ್ಯೊಟ್ಟು ಎಂಬಲ್ಲಿನ ನಿವಾಸಿಯಾಗಿದ್ದ ಜಯೇಶ್ ಸಿರಿಬಾಗಿಲು ಗ್ರಾಮದ ಪೊಲ್ಯೊಟ್ಟು ಎಂಬಲ್ಲಿನ ನಿವಾಸಿಯಾಗಿದ್ದ ತನ್ನ ದೊಡ್ಡಪ್ಪನ ಮಗ ರೋಹಿತ್ ಎಂಬುವರ ಪತ್ನಿ ಸೌಮ್ಯಾ ಅವರ ಕುತ್ತಿಗೆಗೆ ಬಟ್ಟೆಯನ್ನು ಸುತ್ತಿ ಮಾರಕಾಯುಧದಿಂದ ಹೊಟ್ಟೆಗೆ ತಿವಿದು, ಕೊಲೆಗೈದು ಅವರ ಕತ್ತಿನಲ್ಲಿದ್ದ ೧೦ ಗ್ರಾಂ ಚಿನ್ನದ ಮಾಂಗಲ್ಯ ಸರ ಮತ್ತು ಕಿವಿಯಲ್ಲಿದ್ದ ಬೆಂಡೋಲೆಯನ್ನು ದೋಚಿದ್ದನು. ಮಾತ್ರವಲ್ಲದೆ ಸೌಮ್ಯಾ ಅವರ ಪುತ್ರ ೩ ವರ್ಷದ ಜಿಷ್ಣುವಿಗೂ ಚೂರಿಯಿಂದ ತಿವಿದು ಬರ್ಬರವಾಗಿ ಕೊಲೆ ಮಾಡಿ ನಂತರದಲ್ಲಿ ಕೇರಳಕ್ಕೆ ಪರಾರಿಯಾಗಿದ್ದನು. ಚಿನ್ನಾಭರಣಕ್ಕಾಗಿ ತನ್ನ ಪತ್ನಿ, ಮಗುವನ್ನು ಕೊಲೆ ಮಾಡಲಾಗಿದೆ ಎಂದು ಸೌಮ್ಯಾರ ಪತಿ ಲೋಹಿತ್ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.