ರಾಘವೇಂದ್ರ ಕುಲಕರ್ಣಿ
ಶಿರಹಟ್ಟಿ: ಪ್ರಾಚೀನ ಸ್ಮಾರಕಗಳು, ಐತಿಹಾಸಿಕ ಕುರುಹುಗಳು ಇರುವುದು ಆಯಾ ಪ್ರದೇಶಗಳಿಗೆ ಹೆಮ್ಮೆಯೇ ಸರಿ. ಆದರೆ ಅಂತಹದೊಂದು ಪ್ರಾಚೀನ ಸ್ಮಾರಕ ಶಿರಹಟ್ಟಿ ಪಟ್ಟಣದಲ್ಲಿದ್ದರೂ ಅದರ ಅಭಿವೃದ್ಧಿ ಹಾಗೂ ಜೀರ್ಣೋದ್ಧಾರ ಮಾತ್ರ ಗಗನ ಕುಸುಮವಾಗಿದೆ.
ಶಿರಹಟ್ಟಿ ಪಟ್ಟಣದ ಹಳೆಯ ತಾಲೂಕು ಕಚೇರಿ ಕಟ್ಟಡದ ಮುಂಭಾಗದಲ್ಲಿರುವ ಪ್ರಾಚೀನ ಸ್ಮಾರಕಗಳಲ್ಲಿ ಒಂದಾಗಿರುವ ಅವ್ವಲಿಂಗವ್ವನ ಗುಡಿಯ ಸಂರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಂಡು ಅಭಿವೃದ್ಧಿಗೊಳಿಸಿ ಪ್ರವಾಸಿ ತಾಣವನ್ನಾಗಿ ಮಾಡಬೇಕು ಎಂಬುದು ಸ್ಥಳೀಯರ ಬಹುದಿನದ ಬೇಡಿಕೆಯಾಗಿದೆ. ಕಟ್ಟಡ ಪೂರ್ಣ ಪ್ರಮಾಣದಲ್ಲಿ ನಿರ್ಮಾಣವಾಗದೇ ಇರುವುದರಿಂದ ಸಾಕಷ್ಟು ಜನರು ಅದನ್ನು ಅಮರಶಿಲ್ಪಿ ಜಕಣಾಚಾರಿ ಕಟ್ಟಡವೆಂತಲೂ ಮಾತನಾಡಿಕೊಳ್ಳುತ್ತಾರೆ. ಅದೇನೇ ಇರಲಿ ೩೦೦ ವರ್ಷಗಳಷ್ಟು ಹಳೆಯದಾದ ಕಟ್ಟಡವೊಂದು ಶಿರಹಟ್ಟಿ ಪಟ್ಟಣದಲ್ಲಿದ್ದರೂ ಇಲಾಖೆಯ ನಿರ್ಲಕ್ಷ್ಯದಿಂದ ಪುಂಡು ಪೋಕರಿಗಳ ತಾಣವಾಗುತ್ತಿರುವುದು ದುರ್ದೈವದ ಸಂಗತಿ ಎನ್ನುತ್ತಾರೆ ಜನತೆ.
ಶಿರಹಟ್ಟಿ ಪಟ್ಟಣ ಪ್ರಾಚೀನ ಕಾಲದಿಂದಲೂ ತನ್ನದೇ ಆದ ವೈಶಿಷ್ಟ್ಯ ಹೊಂದಿ ಶಿರಪುರ ಎಂದು ಇತಿಹಾಸದಲ್ಲಿ ದಾಖಲಾಗಿದ್ದು, ಪಟ್ಟಣದಲ್ಲಿ ಅನೇಕ ಕುರುಹುಗಳಿವೆ. ಅದರಲ್ಲಿ ಅವ್ವಲಿಂಗವ್ವನ ಗುಡಿ ಪ್ರಮುಖವಾದದ್ದು. ಈ ಕಟ್ಟಡ ಕ್ರಿ.ಶ. ೧೭ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಕಟ್ಟಡವನ್ನು ಲಕ್ಷ್ಮೇಶ್ವರ ದೇಸಗತಿಯ ಸಂಸ್ಥಾಪಕಿಯಾದ ಅವ್ವಲಿಂಗವ್ವನ ಸಮಾಧಿ ಎಂದು ನಿರ್ಮಿಸಲಾಗಿತ್ತು. ಆದರೆ, ಕಾರಣಾಂತಗಳಿಂದ ಅವಳ ಮರಣಾನಂತರ ಅವಳ ಸಮಾಧಿ ಇಲ್ಲಿ ಆಗಿಲ್ಲವೆಂದು ಸ್ಥಳೀಯರು ಹೇಳುತ್ತಾರೆ.
ಈ ಕಟ್ಟಡವೂ ಅತ್ಯಂತ ಸುಂದರವಾಗಿದ್ದು, ನೋಡುಗರನ್ನು ತನ್ನತ್ತ ಆಕರ್ಷಿಸುತ್ತಿದೆ. ಇದು ಆಕರ್ಷಕ ಕಲ್ಲು ಕಟ್ಟಡವಾಗಿದ್ದು, ದ್ವಾರವೂ ಅತ್ಯಂತ ಮನಮೋಹಕ ಕೆತ್ತನೆಗಳಿಂದ ಕೂಡಿದೆ. ಹೊರ ಭಾಗದಲ್ಲಿ ಸುಂದರ ಕೆತ್ತನೆಗಳುಳ್ಳ ಅನೇಕ ಧಾರ್ಮಿಕ ಶಿಲ್ಪಗಳಿವೆ. ಕಮಲ ದಳ ಮತ್ತು ಸರ್ವಾಕೃತಿಯ ಕೆತ್ತನೆಗಳಿಂದ ಕೂಡಿದ್ದು, ಕಟ್ಟಡದ ಒಳಭಾಗದಲ್ಲಿ ಸಮಾಧಿ ಇದೆ. ಐತಿಹಾಸಿಕ ಕಟ್ಟಡವನ್ನು ಜೀರ್ಣೋದ್ಧಾರ ಮಾಡದೆ ಇರುವುದರಿಂದ ಸದ್ಯ ನಿರ್ವಹಣೆ ಇಲ್ಲದೆ ಪಾಳು ಬಿದ್ದಂತಾಗಿದೆ. ಗುಡಿಯ ಪಕ್ಕದಲ್ಲೇ ತಾಲೂಕು ಪಂಚಾಯ್ತಿ, ಪಟ್ಟಣ ಪಂಚಾಯಿತಿ ಮತ್ತು ಪೊಲೀಸ್ ಠಾಣೆಗಳಿದ್ದರೂ, ಅವ್ವಲಿಂಗವ್ವನ ಗುಡಿ ಮೇಲೆ ಪಡ್ಡೆ ಹುಡುಗರು ತಮ್ಮ ಮೋಜು ಮಸ್ತಿಯ ತಾಣವನ್ನಾಗಿಸಿಕೊಂಡಿರುವುದು ದುರಂತವೇ ಸರಿ.