ಬೆಂಗಳೂರು: ವಕೀಲರು ಮತ್ತು ಪೊಲೀಸರ ನಡುವೆ ಸಂಘರ್ಷ ಆಗುತ್ತಿರುವುದು ಒಂದು ಆತಂಕಕಾರಿ ಬೆಳವಣಿಗೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಚಿಕ್ಕಮಗಳೂರಿನ ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು “ಚಿಕ್ಕಮಗಳೂರಿನಲ್ಲಿ ಪೋಲಿಸರೇ ಪ್ರತಿಭಟನೆ ಮಾಡುತ್ತಿದ್ದು, ವಕೀಲರೂ ಪೊಲೀಸರ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದಾರೆ. ವಕೀಲರು ಮತ್ತು ಪೊಲೀಸರ ನಡುವೆ ಸಂಘರ್ಷ ಆಗುತ್ತಿರುವುದು ಒಂದು ಆತಂಕಕಾರಿ ಬೆಳವಣಿಗೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಗೃಹ ಇಲಾಖೆಯ ಮೇಲೆ ಸರ್ಕಾರದ ಮತ್ತು ಅಧಿಕಾರಿಗಳ ನಿಯಂತ್ರಣ ತಪ್ಪಿದೆ. ಗೃಹ ಇಲಾಖೆಯು ಈ ರೀತಿ ಅಶಿಸ್ತು ತೋರುತ್ತಿರುವುದು ಒಂದು ಗಂಭೀರವಾದ ವಿಚಾರ, ಸರ್ಕಾರ ಈ ಕೂಡಲೇ ಇದನ್ನು ಸರಿಪಡಿಸದಿದ್ದರೆ ರಾಜ್ಯದಲ್ಲಿ ಉಂಟಾಗುವ ಅರಾಜಕತೆಗೆ ಕಾರಣವಾಗುತ್ತೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕೂಡಲೇ ಮಧ್ಯ ಪ್ರವೇಶಿಸಿ ಕಾನೂನು ಎಲ್ಲರೂ ಪಾಲಿಸಬೇಕು ಅನ್ನುವ ವಾತಾವರಣ ಮೂಡಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸುತ್ತೇನೆ” ಎಂದು ಬರೆದು ಕೊಂಡಿದ್ದಾರೆ.