ಷೇರುಪೇಟೆಯಲ್ಲಿ ಕರಡಿ ಕುಣಿತ ಸೂಚ್ಯಂಕ ಕುಸಿತ

ಷೇರುಪೇಟೆ
Advertisement

ಮುಂಬೈ: ಹಣದುಬ್ಬರ ತಡೆಯಲು ಬಡ್ಡಿದರ ಹೆಚ್ಚಿಸಲಾಗುವುದೆಂಬ ಅಮೆರಿಕದ ಫೆಡರಲ್ ರಿಸರ್ವ್ ಹೇಳಿಕೆ ಬೆನ್ನಲ್ಲೇ ಭಾರತ ಸೇರಿದಂತೆ ವಿಶದ ಎಲ್ಲ ಷೇರುಪೇಟೆಗಳ ವ್ಯವಹಾರದ ಮೇಲೆ ಪರಿಣಾಮ ಬೀರಿದೆ. ಮುಂಬೈ ಬಂಡವಾಳ ಪೇಟೆಯಲ್ಲಿ ಸೋಮವಾರ ಬಿಎಸ್‌ಇ ಷೇರುಸೂಚ್ಯಂಕ ೮೬೦ ಅಂಶಗಳಷ್ಟು ಕುಸಿತ ಕಂಡಿದ್ದು, ೫೭,೯೭೨ ರಲ್ಲಿ ವ್ಯವಹಾರ ಕೊನೆಗೊಂಡಿದೆ. ಬಹಳ ದಿನಗಳ ನಂತರ ಮೊದಲ ಬಾರಿಗೆ ೫೮ಸಾವಿರಕ್ಕಿಂತಲೂ ಬಿಎಸ್‌ಇ ಸೂಚ್ಯಂಕ ಕಡಿಮೆಯಾಗಿರುವುದು ವಿಶೇಷ.ಮಾಹಿತಿ ತಂತ್ರಜ್ಞಾನ, ಬ್ಯಾಂಕ್ ಮತ್ತು ಲೋಹಗಳಿಗೆ ಸಂಬಂಧಿಸಿದ ಷೇರುಗಳು ಭಾರಿ ನಷ್ಟ ಅನುಭವಿಸಿವೆ.ಅ ಆದರೆ ಬ್ರಿಟಾನಿಯಾ, ಮಾರುತಿ ಸುಜುಕಿ ಷೇರುಗಳು ಶೇ, ಒಂದರಷ್ಟು ಲಾಭ ಗಳಿಸಿದ್ದು ಗಮನಾರ್ಹ. ಮತ್ತೊಂದೆಡೆ ಎನ್‌ಎಸ್‌ಇ ನಿಫ್ಟಿ ಷೇರುಗಳ ವ್ಯವಹಾರವೂ ೨೫೦ ಅಂಶ ಕುಸಿತ ಕಂಡಿದೆ. ೧೭,೩೧೨ರಲ್ಲಿ ನಿಫ್ಟಿ ವ್ಯವಹಾರ ಮುಕ್ತಾಯವಾಗಿದೆ.
ರೂಪಾಯಿ ಮೌಲ್ಯ ಮತ್ತಷ್ಟು ಕುಸಿತ:
ಹಣದುಬ್ಬರ ನಿಯಂತ್ರಣಕ್ಕೆ ಬಡ್ಡಿದರ ಹೆಚ್ಚಿಸುವ ಅಮೆರಿಕ ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೋವೆಲ್‌ರ ಹೇಳಿಕೆ ಬೆನ್ನಲ್ಲೇ ಪ್ರಬಲ ಡಾಲರ್ ಎದುರು ರೂಪಾಯಿ ಮತ್ತೆ ಮುಗ್ಗರಿಸಿದೆ. ಸೋಮವಾರದ ರೂಪಾಯಿಯ ವ್ಯವಹಾರ ೮೦.೧೪ ರೂ.ಗಳಿಗೆ ಮುಕ್ತಾಯವಾಗಿದ್ದು, ಸಾರ್ವಕಾಲಿಕ ಕುಸಿತವಾಗಿದೆ. ಕಳೆದ ತಿಂಗಳಲ್ಲಿ ರೂಪಾಯಿ ಮೌಲ್ಯ ೮೦.೦೬ಕ್ಕೆ ಕುಸಿದಿದ್ದೇ ಅತಿಕಡಿಮೆ ಎನ್ನಲಾಗಿತ್ತು.