ಶ್ರೀ ಕ್ಷೇತ್ರ ಧರ್ಮಸ್ಥಳ ಅಭಿವೃದ್ಧಿಗೆ ಐದು ಕೋಟಿ ಅನುದಾನ: ಸಚಿವ ಆನಂದ್ ಸಿಂಗ್

ಧರ್ಮಸ್ಥಳ
Advertisement

ಧರ್ಮಸ್ಥಳ: ಪ್ರವಾಸೋದ್ಯಮ ಇಲಾಖೆ ವತಿಯಿ‌ಂದ‌ ಮುಂದಿನ‌ ದಿನಗಳಲ್ಲಿ ಐದು‌ ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಶ್ರಮಿಸಲಾಗುವುದು ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್ ಅವರು ಭರವಸೆ ನೀಡಿದ್ದಾರೆ.
ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕು ಶ್ರೀ ಕ್ಷೇತ್ರ‌ ಧರ್ಮಸ್ಥಳದಲ್ಲಿ ಕೈಗೊಳ್ಳಲಾಗುವ ಸ್ನಾನಘಟ್ಟ ಅಭಿವೃದ್ಧಿಯ ಕಾಮಗಾರಿಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ 4.83 ರೂ. ಕೋಟಿ ವೆಚ್ಚದಲ್ಲಿ ಸ್ನಾನ ಘಟ್ಟ ನಿರ್ಮಿಸಿ, ಇಲ್ಲಿಗೆ ಬರುವ ಭಕ್ತರಿಗೆ ಮೂಲಸೌಲಭ್ಯ ಕಲ್ಪಿಸಲಾಗುತ್ತದೆ. ಕ್ಷೇತ್ರದ ಅಭಿವೃದ್ಧಿಗೆ ಇನ್ನಷ್ಟು ಶ್ರಮಿಸಲಾಗುವುದು. ಕ್ಷೇತ್ರದ ಅಭಿವೃದ್ಧಿಗೆ ಐದು ಕೋಟಿ ಅನುದಾ‌ನ ಒದಗಿಸಲು ಒಂದು ವಾರದಲ್ಲಿ ಕ್ರಮಕೈಗೊಳ್ಳಲಾಗುವುದುಎಂದು ತಿಳಿಸಿದರು.
ಈಗಾಗಲೇ ಪಣಂಬೂರು ಬೀಚ್, ತಣ್ಣೀರುಬಾವಿ ಬೀಚ್, ಸೋಮೇಶ್ವರ ಬೀಚ್, ಉಳ್ಳಾಲ ಬೀಚ್ ಹಾಗೂ ಈ ಭಾಗದ ಧಾರ್ಮಿಕ ಕೇಂದ್ರಗಳಾದ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನ, ಸೌತಡ್ಕ ಗಣಪತಿ ದೇವಸ್ಥಾನ, ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನ ಸೇರಿದಂತೆ ಇಲ್ಲಿನ ಪ್ರವಾಸಿ ತಾಣಗಳ ಮೂಲಸೌಕರ್ಯ ಅಭಿವೃದ್ಧಿಗೆ ಇಲಾಖೆ ವತಿಯಿಂದ 23.6 ರೂ. ಕೋಟಿ ವೆಚ್ಚದ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಕ್ರೂಸ್ ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ:
ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವಾಸಿಗರನ್ನು ಆಕರ್ಷಿಸಲು ಕ್ರೂಸ್ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲಾಗುವುದು. ವಿದೇಶಿ ಕ್ರೂಸ್ ಗಳಿಂದ ಬರುವ ಅತಿಥಿಗಳಿಗೆ ಸ್ಥಳೀಯ ಕಲೆ ಸಂಸ್ಕೃತಿ ಹಾಗೂ ಪರಂಪರೆಯನ್ನು ಪರಿಚಯಿಸಲಾಗುವುದು ಎಂದರು.
ಧರ್ಮಸ್ಥಳದ ಅಭಿವೃದ್ಧಿ ವಿಚಾರದಲ್ಲಿ ಸರ್ಕಾರ ಎಲ್ಲ‌ ರೀತಿಯ ನೆರವು ನೀಡುತ್ತಿದೆ. ಮುಂದಿನ ದಿನಗಳಲ್ಲೂ ಮೂಲಸೌಲಭ್ಯ ಕಲ್ಪಿಸಲು ಶ್ರಮಿಸಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿರುವ ಧಾರ್ಮಿಕ ಕ್ಷೇತ್ರಗಳಲ್ಲಿ ಧರ್ಮಸ್ಥಳವು ವಿಶೇಷ ಸ್ಥಾನ ಹೊಂದಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಶಿವ ಭಕ್ತರು ಭೇಟಿ ನೀಡುವ ಸ್ಥಳ ಧರ್ಮಸ್ಥಳ. ಶಿವನನ್ನು ಆರಾಧಿಸುವ ಈ ಪವಿತ್ರ ಸ್ಥಳದಲ್ಲಿ ಪರಶಿವನೇ ನೆಲೆಸಿದ್ದಾನೆ. ಧರ್ಮಸ್ಥಳ ಮಂಜು‌ನಾಥನ ದರ್ಶನ ಪಡೆದರೆ ಜೀವನದಲ್ಲಿ ಧನಾತ್ಮಕ ಶಕ್ತಿ ಪ್ರಾಪ್ತಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ನಾನು ಚಿಕ್ಕವಯಸ್ಸಿನಲ್ಲಿ ಕುಟುಂಬದೊಂದಿಗೆ ಧರ್ಮಸ್ಥಳಕ್ಕೆ ಬರುತ್ತಿದ್ದೆ. ಆ ದಿನಗಳು ತುಂಬಾ ಚೆನ್ನಾಗಿದ್ದವು ಎಂದು ಸಚಿವರು ಬಾಲ್ಯದ ದಿ‌ನಗಳನ್ನು ಇದೇ ವೇಳೆ ಮೆಲುಕು ಹಾಕಿದರು. ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯರೂ‌ ಆದ ಶ್ರೀ ಕ್ಷೇತ್ರ‌ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ಡಾ.ಡಿ.ವೀರೇಂದ್ರ ಹೆಗ್ಗಡೆ, ಸ್ಥಳೀಯ ಶಾಸರಾದ ಶ್ರೀ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯ ಶ್ರೀ ಪ್ರತಾಪ್ ಸಿಂಹ ನಾಯಕ್, ಜಿಲ್ಲಾಧಿಕಾರಿ‌ ರವಿಕುಮಾರ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು. ‌