ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ವಿವಿಧ ದೇಶಗಳ ನೂರಾರು ಕೃಷ್ಣ ಭಕ್ತರು ಶನಿವಾರ ಭೇಟಿ ನೀಡಿ ಶ್ರೀ ರಾಯರ ದರ್ಶನಾಶೀರ್ವಾದ ಪಡೆದರು.
ಆಧ್ಯಾತ್ಮಿಕ ಗುರು ಶ್ರೀ ವಿಶ್ವಾನಂದ ಗುರೂಜಿ ನೇತೃತ್ವದಲ್ಲಿ ಭಕ್ತಿ ಮಾರ್ಗ ಇಂಡಿಯಾ ಎಂಬ ಯಾತ್ರೆ ನಡೆಸಿದ್ದು, ಶುಕ್ರವಾರ ರಾತ್ರಿ ರಾಯರ ಮಠಕ್ಕೆ ಆಗಮಿಸಿದ್ದಾರೆ. ಶನಿವಾರ ಬೆಳಗ್ಗೆ ಮಂಚಾಲಮ್ಮ ದೇವಿ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನ ದರ್ಶನ ಪಡೆದರು.
ಜರ್ಮನಿ, ದಕ್ಷಿಣ ಆಫ್ರಿಕಾ, ರಷ್ಯಾ, ಪೋಲ್ಯಾಂಡ್ ಸೇರಿದಂತೆ ವಿವಿಧೆಡೆಯಿಂದ ಕೃಷ್ಣ ಭಕ್ತರು ಆಗಮಿಸಿದ್ದಾರೆ. ಎಲ್ಲರೂ ಹಿಂದೂ ಸಾಂಪ್ರಾಯಿಕ ಉಡುಗೆಯಲ್ಲಿಯೇ ಆಗಮಿಸಿದ್ದು ವಿಶೇಷವಾಗಿತ್ತು. ಅಲ್ಲದೇ, ಶ್ರೀಕೃಷ್ಣನ ಶ್ಲೋಕಗಳನ್ನು ಪಠಿಸುತ್ತಿದ್ದರು.
ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ದರ್ಶನ ಪಡೆದ ವಿದೇಶಿ ಭಕ್ತರಿಗೆ ಶ್ರೀಗಳು, ಹಿಂದುತ್ವದ ಮಹತ್ವ, ರಾಯರ ಮಹಿಮೆ, ಪವಾಡಗಳು ಕುರಿತು ವಿವರಿಸಿದರು.
ಇಡೀ ವಿಶ್ವದಲ್ಲಿ ನೆಲೆಸಿರುವ ಭಕ್ತರಿಗೆ ರಾಯರು ಅನುಗ್ರಹಿಸುತ್ತಿರುವ ಕುರಿತು ಘಟನಾವಳಿ ಸಮೇತ ವಿವರಿಸಿದರು.
ಹಿಂದೆ ಬ್ರಿಟಷ್ ಆಡಳಿತದಲ್ಲಿ ಕಮಿಶನರ್ ಆಗಿದ್ದ ಸರ್.ಥಾಮಸ್ ಮುನ್ರೋ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಸಂಗತಿಯನ್ನು ವಿವರಿಸಿದರು. ಬಳಿಕ ಎಲ್ಲರಿಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಸ್ತೋತ್ರ ಹೇಳಿಕೊಟ್ಟರು.
ನಂತರ ಫಲಮಂತ್ರಾಕ್ಷತೆ ವಸ್ತ್ರ ನೀಡಿ ಆಶೀರ್ವದಿಸಿದರು. ಬಳಿಕ ವಿದೇಶಿ ಭಕ್ತರೊಂದಿಗೆ ಶ್ರೀಗಳೇ ಮಠದ ಪ್ರಾಕಾರದಲ್ಲಿ ಪ್ರದಕ್ಷಿಣೆ ಮಾಡಿ ಭಕ್ತರಿಗೆ ಮಠದ ಕುರಿತು ಪರಿಚಯ ಮಾಡಿಕೊಟ್ಟರು.