ಹುಬ್ಬಳ್ಳಿ: ನನಗೆ ಜಗದೀಶ್ ಶೆಟ್ಟರ್ ಅವರು ಗುರುಗಳು. ಅವರು ನನ್ನನ್ನು ಬಿ.ಎಲ್. ಸಂತೋಷ ಅವರ ಮಾನಸ ಪುತ್ರ ಎಂದು ಯಾಕೆ ಹೇಳಿದರೂ ಎಂಬುದನ್ನು ಅವರನ್ನೇ ಕೇಳಿ ಎಂದು ಬಿಜೆಪಿ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಹೇಳಿದರು.
ಮಹಾನಗರ ಪಾಲಿಕೆ ಕಚೇರಿಯಲ್ಲಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಅವರು, ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆಯು ಒಗ್ಗಟ್ಟಿನ ನಿರ್ಧಾರವಾಗಿರುತ್ತದೆ. ವ್ಯಕ್ತಿಗತವಾಗಿ ಎಂದಿಗೂ ತಿರ್ಮಾನ ಆಗುವುದಿಲ್ಲ ಎಂದರು.
ನನಗೆ ಟಿಕೆಟ್ ನೀಡುವುದನ್ನು ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ಒಬ್ಬರೇ ನಿರ್ಣಯ ಮಾಡಿಲ್ಲ. ಬಿಜೆಪಿಯ ಸಂಸದೀಯ ಮಂಡಳಿ ನಿರ್ಣಯ ಮಾಡಿದೆ ಎಂದರು. ಶೆಟ್ಟರ್ ಅವರಿಗೆ ಪಕ್ಷ ಎಲ್ಲ ಗೌರವ ಕೊಟ್ಟಿದೆ. ಕಳೆದ ಚುನಾವಣೆಯಲ್ಲಿ ಕಲಘಟಗಿ ಕ್ಷೇತ್ರದ ಟಿಕೆಟ್ ನನಗೆ ಹಂಚಿಕೆಯಾಗಿತ್ತು. ಕೊನೆಯಲ್ಲಿ ಬದಲಾವಣೆ ಮಾಡಿದರೂ ಪಕ್ಷದ ತೀರ್ಮಾನಕ್ಕೆ ಬದ್ಧವಾಗಿ ತಕ್ಷಣ ಹಿಂದೆ ಸರಿದ್ದಿದ್ದೆ ಎಂದರು.
ಏ. 20ರಂದು ಮತ್ತೊಮ್ಮೆ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು.