ಹುಬ್ಬಳ್ಳಿ: ಶಿರಸಿಯಲ್ಲಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ರಾಜೀನಾಮೆ ಸಲ್ಲಿಸಿದ್ದು, ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಶೆಟ್ಟರ್ ಅವರನ್ನು ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗಲು ಕಾಂಗ್ರೆಸ್ ಮುಖಂಡರು ಸಿದ್ದತೆ ಮಾಡಿಕೊಂಡಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಈಗಾಗಲೇ ಬೀಡು ಬಿಟ್ಟಿರುವ ಕಾಂಗ್ರೆಸ್ ಮುಖಂಡ ರಾಬರ್ಟ್ ದದ್ದಾಪುರಿ, ಜಗದೀಶ ಶೆಟ್ಟರ್ ಅವರನ್ನು ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಕಳಿಸಿ ಕೊಡುವ ಜವಾಬ್ದಾರಿ ವಹಿಸಲಾಗಿದೆ. ಇವರೊಂದಿಗೆ ಕಾಂಗ್ರೆಸ್ ಮುಖಂಡರು ನಿಲ್ದಾಣದಲ್ಲಿ ಕಾಯುತ್ತಿದ್ದಾರೆ.
ಶೆಟ್ಟರ್ ಅವರ ಜೊತೆ, ಸೆಂಟ್ರಲ್ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ರಜತ ಉಳ್ಳಾಗಡ್ಡಿಮಠ ಅವರನ್ನು ಸಹ ಬೆಂಗಳೂರಿಗೆ ಬರುವಂತೆ, ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ. ಹಾಗಾಗಿ, ರಜತ ಕೂಡ ನಿಲ್ದಾಣದ ಬಳಿ ಕಾಯುತ್ತಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಬರ್ಟ್ ದದ್ದಾಪುರಿ, ಕಾಂಗ್ರೆಸ್ಗೆ ಜಗದೀಶ ಶೆಟ್ಟರ್ ಅವರು ಸೇರುವುದು ಖಚಿತ. ಅವರೊಂದಿಗೆ ನಮ್ಮ ನಾಯಕರು ಈಗಾಗಲೇ ಮಾತನಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ನಮ್ಮ ಪಕ್ಷಕ್ಕೆ ಸೇರುವುದರಿಂದ ಶಕ್ತಿ ದೊರೆಯಲಿದೆ. ಲಿಂಗಾಯತ ನಾಯಕರನ್ನು ಬಿಜೆಪಿ ಗೌರವದಿಂದ ನಡೆಸಿಕೊಳ್ಳುತ್ತಿಲ್ಲ. ಕಾಂಗ್ರೆಸ್ ಶೆಟ್ಟರ್ ಅವರನ್ನು ಗೌರವಯುತವಾಗಿ ಕಾಣಲಿದೆ ಎಂದರು.