ಶೆಟ್ಟರಿಗೆ ಟಿಕೆಟ್ ತಪ್ಪಿಸುತ್ತಿರುವುದು ನಾವಲ್ಲ

ಸಿಎಂ ಬೊಮ್ಮಾಯಿ
Advertisement

ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರಿಗೆ ಟಿಕೆಟ್ ತಪ್ಪಿಸುತ್ತಿರುವುದು ನಾವಲ್ಲ. ಶೆಟ್ಟರ್ ಬೆಂಬಲಿಗರು ನೂರಾರು ಆರೋಪ ಮಾಡುತ್ತಾರೆ ಅವರ ಆರೋಪದಲ್ಲಿ ಹುರುಳಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿನ ಆದರ್ಶನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲವೂ ಸುಳ್ಳು ವದಂತಿಗಳು. ಈವರೆಗೂ ನಾವು ಪಕ್ಷದ ವರಿಷ್ಟರ ಜೊತೆ ಸಂಪರ್ಕದಲ್ಲಿದ್ದೇವೆ. ನಾವು ಹಾಗೂ ಶೆಟ್ಟರ್ ಬಹಳ ಆತ್ಮೀಯರು.ಚುನಾವಣಾ ರಾಜಕಾರಣಕ್ಕೆ ಬರುವ ಮುಂಚಿತವಾಗಿಯೇ ಸ್ನೇಹಿತರು. ಯಾವುದೇ ಕಾರಣಕ್ಕೂ ಟಿಕೆಟ್‌ ತಪ್ಪಿಸೋ ಕೆಲಸ ಮಾಡಲ್ಲ. ಶೆಟ್ಟರ್ ಟಿಕೆಟ್ ಗಾಗಿ ಬಹಳ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ್ದೇವೆ. ಟಿಕೆಟ್ ಕೊಡಿಸಲು ಸರ್ವ ಪ್ರಯತ್ನ ಮಾಡುತ್ತಿದ್ದೇವೆ. ಕಳೆದ ದಿನ ಧರ್ಮೇಂದ್ರ ಪ್ರಧಾನ ಬಳಿ ಚರ್ಚೆ ಮಾಡಿದ್ದೇನೆ ಎಂದರು.

ಶೆಟ್ಟರ್ ಜನಸಂಘ ಕಾಲದ ಮನೆತನ. ಬಿಜೆಪಿಗೆ ಶೆಟ್ಟರ್ ಅತ್ಯಂತ ನಿಷ್ಠರು. ಉತ್ತರ ಕರ್ನಾಟಕ ಭಾಗಕ್ಕೆ ಅತ್ಯಂತ ಅವಶ್ಯಕವಾಗಿದ್ದಾರೆ. ಅವರನ್ನು ಉಳಿಸಿಕೊಳ್ಳಬೇಕೆಂದು ಹೇಳಿದ್ದೇನೆ. ಜೆ.ಪಿ. ನಡ್ಡಾ ಅವರಿಗೂ ಮಾತನಾಡಿದ್ದೇನೆ. ಅವರನ್ನು ಉಳಿಸಿಕೊಳ್ಳುವ ವಿಶ್ವಾಸ ಇದೆ. ಜಗದೀಶ್ ಶೆಟ್ಟರ್ ಮನವೊಲಿಕೆ ಪ್ರಯತ್ನ ಮಾಡಿದ್ದೇವೆ ಎಂದರು.

ನೀರಾವರಿ ಯೋಜನೆಯಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರ ಆರೋಪ ಮಾಡಿದ ನೆಹರೂ ಓಲೇಕಾರ ಆರೋಪಕ್ಕೆ ಬೊಮ್ಮಾಯಿ ತಿರುಗೇಟು ನೀಡಿದ್ದು, ಭ್ರಷ್ಟಾಚಾರ ಆರೋಪಕ್ಕೆ ದಾಖಲೆಗಳನ್ನ ನೀಡಲಿ. ಅದೇ ಹಗರಣದಲ್ಲಿ ನೆಹರೂ ಓಲೇಕಾರ್ ಗೆ ಶಿಕ್ಷೆಯೂ ಆಗಿದೆ ಎಂದರು.

63 ಪ್ರತಿಶತ ಕ್ಷೇತ್ರಗಳಲ್ಲಿ ಬಿಜೆಪಿಯಲ್ಲಿ ಗೊಂದಲವಿದೆ ಇದು ಕಾಂಗ್ರೆಸ್ ಗೆ ಪ್ಲಸ್ ಪಾಯಿಂಟ್ ಎಂಬ ಡಿಕೆಶಿ ಹೇಳಿಕೆ ವಿಚಾರ
ಹಾಗಾದ್ರೆ ಕಾಂಗ್ರೆಸ್ ನವರಿಗೆ ಸ್ವಂತ ಶಕ್ತಿ ಇಲ್ಲ ಅಂತಾ ಆಯ್ತು ಎಂದು ಕಿಡಿ ಕಾರಿದರು.
ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ. ಶೀಘ್ರವೇ ಬಿಜೆಪಿಯಲ್ಲಿ ಎಲ್ಲವೂ ಸರಿಹೋಗುತ್ತದೆ. ಇನ್ನೆರಡು ಮೂರು ದಿನಗಳಲ್ಲಿ ಎಲ್ಲವೂ ತಿಳಿಯಾಗುತ್ತದೆ. ಚುನಾವಣೆ ಎಂದರೆ ಸವಾಲು. ನನ್ನ ಮೊದಲ ಚುನಾವಣೆಯಲ್ಲಿಯೂ ಸೋಲಾಗುತ್ತೆ ಅಂತ ಬರೆದಿದ್ದರು. ಆದರೆ ಅವೆಲ್ಲವೂ ಸುಳ್ಳಾಗಿದೆ ನಾನು ಗೆದ್ದು ಬಂದಿದ್ದೇನೆ.
ನಾಮಪತ್ರ ಸಲ್ಲಿಕೆ:
ಇಂದು ಶಿಗ್ಗಾವಿಗೆ ನಾಮಪತ್ರ ಸಲ್ಲಿಸಲು ತೆರಳುತ್ತಿದ್ದೇನೆ. ಒಳ್ಳೆ ಮೂಹೂರ್ತ ಇರೋ ಕಾರಣ ನಾಮಪತ್ರ ಸಲ್ಲಿಸುತ್ತಿದ್ದೇನೆ. 19 ರಂದು ಜನ ಸೇರಿಸಿ ನಾಮಪತ್ರ ಸಲ್ಲಿಸುತ್ತೇನೆ.
ರಾಜ್ಯದಲ್ಲಿ ಚುನಾಚಣೆ ಕಣ ಸಿದ್ದವಾಗಿದೆ. ನಮಗೆ ಆತ್ಮವಿಶ್ವಾಸ ಇದೆ, ಸಂಪೂರ್ಣ ಬಹುಮತ ಬರತ್ತೇವೆ. ಉಳಿದ ಕ್ಷೇತ್ರಕ್ಕೆ ಇನ್ನೆರಡು ದಿನಗಳಲ್ಲಿ ತೀರ್ಮಾನ. 12 ಕ್ಷೇತ್ರಗಳ ಬಗ್ಗೆ ಚರ್ಚೆಯಾಗಿದೆ. ಕೇಂದ್ರ ಚುನಾವಣೆ ಸಮಿತಿ ತೀರ್ಮಾನ ಮಾಡತ್ತದೆ ಎಂದರು.