ಶಿರಾಡಿ ಘಾಟ್ ದುರಸ್ತಿ-ವಾರದೊಳಗೆ ವಿಶೇಷ ಸಭೆ

Advertisement

ಮಂಗಳೂರು: ಶಿರಾಡಿ ಘಾಟ್ ಹೆದ್ದಾರಿ ದುರಸ್ತಿ ಹಾಗೂ ಅಭಿವೃದ್ಧಿ ಕುರಿತು ವಾರದೊಳಗೆ ವಿಶೇಷ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರ ಜತೆ ಅವರು ಮಾತನಾಡಿದರು.
ಹೆದ್ದಾರಿ ದುರಸ್ತಿ ನಡೆಸುವುದಾಗಿ ಎನ್‌ಎಚ್ ಅಧಿಕಾರಿಗಳು ಹೇಳಿದ್ದರು. ದುರಸ್ತಿ ವಿಳಂಬಕ್ಕೆ ಕಾರಣ ತಿಳಿಯಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜತೆ ಸಭೆ ನಡೆಸಲಾಗುವುದು. ಬಳಿಕ ದುರಸ್ತಿ ಕಾರ್ಯ ಆರಂಭಿಸಲಾಗುವುದು. ತಾತ್ಕಾಲಿಕ ದುರಸ್ತಿಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡುವುದು, ಸುರಂಗ ಮಾರ್ಗ ರಚನೆ ಸಹಿತ ಮೂರು ಪರಿಹಾರೋಪಾಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.
ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸಿಎಂ, ಮಹಾರಾಷ್ಟ್ರ ಗಡಿ ಪ್ರದೇಶದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮಹಾರಾಷ್ಟ್ರಕ್ಕೆ ಬಸ್ ಓಡಾಟ ಆರಂಭಗೊಂಡಿದೆ. ಡಿ. 14ರಂದು ಕೇಂದ್ರ ಗೃಹ ಸಚಿವರು ಎರಡೂ ರಾಜ್ಯಗಳ ಸಿಎಂಗಳ ಸಭೆ ಕರೆದಿದ್ದಾರೆ. ಅದಕ್ಕೂ ಮುನ್ನ, ಸೋಮವಾರ ರಾಜ್ಯದ ಸಂಸದರ ಜತೆ ನಾನು ಸಮಾಲೋಚನೆ ನಡೆಸುತ್ತೇನೆ. ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ರಕ್ಷಣೆಗೂ ನಾವು ಬದ್ಧರಾಗಿದ್ದು, ಅದಕ್ಕೆ ಬೇಕಾದ ಎಲ್ಲ ಕ್ರಮ ಕೈಗೊಳ್ಳಲಾಗುವುದು. ಬೆಳಗಾವಿ ಅಧಿವೇಶನ ಸಂದರ್ಭ ಎಂಇಎಸ್ ಸಮಾವೇಶಕ್ಕೆ ಅನುಮತಿ ನೀಡಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಭಯೋತ್ಪಾದನೆ, ಉಗ್ರರ ನಿಗ್ರಹಕ್ಕೆ ಸರಕಾರ ದಿಟ್ಟ ಕ್ರಮ ಕೈಗೊಂಡಿದೆ. ಈಗಾಗಲೇ ಉಗ್ರರ 15 ಸ್ಲೀಪರ್ ಸೆಲ್‌ಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಂಡಿದ್ದೇವೆ. ಇದು ನಿರಂತರ ಪ್ರಕ್ರಿಯೆ. ಉಗ್ರರಿಗೆ ವಿದೇಶದೊಂದಿಗೆ ಇರುವ ಲಿಂಕ್‌ಗಳನ್ನು ಪತ್ತೆಹಚ್ಚಲಾಗುತ್ತಿದೆ. ಈ ಸಂಬಂಧ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜತೆಯಾಗಿ ಕೆಲಸ ಮಾಡುತ್ತಿವೆ. ಎನ್‌ಐಎ ಕೂಡ ಈ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ಸಿಎಂ ಹೇಳಿದರು.