ಶಿರಸಿ: ಶಿರಸಿ ಪ್ರತ್ಯೇಕ ಜಿಲ್ಲೆ ಘೋಷಣೆಗಾಗಿ ಜನರಿಂದ ಒತ್ತಡ ಹೆಚ್ಚಾಗುತ್ತಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು, ಕಾರ್ಮಿಕರ ರಾಜ್ಯ ವಿಮಾ ಚಿಕಿತ್ಸಾಲಯ ಉದ್ಘಾಟನೆ ವೇಳೆ ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ . ಸಚಿವ ಹೆಬ್ಬಾರ್ ಎದುರೇ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಭಾಷಣದಲ್ಲಿ ಜನರ ಅಭಿಪ್ರಾಯದ ಮಾತುಗಳನ್ನು ಹೇಳುತ್ತಾ, ಶಿರಸಿ ಪ್ರತ್ಯೇಕ ಜಿಲ್ಲೆ ಘೋಷಣೆಗಾಗಿ ಜನರಿಂದ ಒತ್ತಡ ಹೆಚ್ಚಾಗುತ್ತಿದೆ. ಭೌಗೋಳಿಕವಾಗಿ ಉತ್ತರ ಕನ್ನಡ ಜಿಲ್ಲೆ ಬಹಳ ವಿಸ್ತಾರವಾಗಿದೆ ಎಂದರು. ಪ್ರತ್ಯೇಕ ಜಿಲ್ಲೆ ಬೇಡಿಕೆ ಸಂಬಂಧ ಈಗಾಗಲೇ ಮುಖ್ಯಮಂತ್ರಿ ಬಳಿ ಚರ್ಚಿಸಲಾಗಿದೆ. ಪ್ರತ್ಯೇಕ ಜಿಲ್ಲೆಯಾಗಲು ಸಚಿವ ಹೆಬ್ಬಾರ್ ಅವರ ಸಹಕಾರವೂ ಮುಖ್ಯ. ಈ ಬಗ್ಗೆ ಮತ್ತೊಮ್ಮೆ ಮುಖ್ಯಮಂತ್ರಿ ಅವರಲ್ಲಿ ಇಬ್ಬರೂ ಚರ್ಚಿಸುತ್ತೇವೆ. ಸಮಯ, ಸಂದರ್ಭ ನೋಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.